ಕರ್ನಾಟಕ

karnataka

ETV Bharat / state

'ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ': ದಕ್ಷಿಣ ಕನ್ನಡದ ಮಾದರಿ ಸರ್ಕಾರಿ ಶಾಲೆಯಲ್ಲಿದೆ ಕೃಷಿ ಭಂಡಾರ!

ಪುತ್ತೂರು ತಾಲೂಕಿನ ಆನಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ತುಂಬಾ ವಿವಿಧ ಗಿಡ, ಮರ ಬೆಳೆಸುವ ಮೂಲಕ ಕೃಷಿ ಭಂಡಾರವನ್ನೇ ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಹಸಿರು ಪರಿಸರದಲ್ಲಿ ಶಿಕ್ಷಣ ನೀಡಲಾಗುತ್ತಿದೆ.

anadka-governmant-primary-school-had-green-environment-in-mangaluru
'ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ': ದಕ್ಷಿಣ ಕನ್ನಡದ ಮಾದರಿ ಸರ್ಕಾರಿ ಶಾಲೆಯಲ್ಲಿದೆ ಕೃಷಿ ಭಂಡಾರ!

By ETV Bharat Karnataka Team

Published : Sep 5, 2023, 6:19 PM IST

Updated : Sep 5, 2023, 6:53 PM IST

ದಕ್ಷಿಣ ಕನ್ನಡದ ಮಾದರಿ ಸರ್ಕಾರಿ ಶಾಲೆಯಲ್ಲಿದೆ ಕೃಷಿ ಭಂಡಾರ

ಪುತ್ತೂರು(ದಕ್ಷಣ ಕನ್ನಡ): ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಸಮಸ್ಯೆಗಳ ಆಗರ ಎಂದು ಜನರು ಮೂಗು ಮುರಿಯುವುದೇ ಹೆಚ್ಚು. ಆದರೆ ಈ ಮಾತಿಗೆ ವಿರುದ್ಧವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರು ಸರ್ಕಾರಿ ಶಾಲೆ ಸಮಸ್ಯೆಗಳನ್ನು ಮೆಟ್ಟಿ ನಿಂತು ಮಾದರಿ ಶಾಲೆಯಾಗಿ ಹೊರಹೊಮ್ಮಿದೆ. ಈ ಶಾಲೆಯ ವಿಶೇಷತೆಯೆಂದರೆ ಬೃಹತ್ ಕೃಷಿ ಭಂಡಾರವನ್ನೇ ಹೊಂದಿರುವುದು.

ಹೌದು, ಇದು ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶೇಷತೆ. "ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ'' ಎಂಬ ಧ್ಯೇಯ ವಾಕ್ಯದೊಂದಿಗೆ ತೀರಾ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈ ಶಾಲೆಯ ಕೃಷಿ ಕಾಯಕವನ್ನೊಮ್ಮೆ ನೋಡಿದರೆ ಎಂತಹವರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುವುದರಲ್ಲಿ ಸಂಶಯವೇ ಇಲ್ಲ. ಗ್ರಾಮೀಣ ಪ್ರದೇಶಲ್ಲಿ ತನ್ನ ಧ್ಯೇಯ ವಾಕ್ಯಕ್ಕೆ ತಕ್ಕಂತೆ ಹಚ್ಚ ಹರಿಸಿರಿನಿಂದ ಕೂಡಿದ ಪ್ರಕೃತಿದತ್ತ ವಾತಾವರಣದಲ್ಲಿ ಈ ಶಾಲೆಯಲ್ಲಿ ಅಕ್ಷರ ಕಲಿಕೆ ಜೊತೆಗೆ ಕೃಷಿ ಕಲಿಕೆಯೂ ಜತೆಯಾಗಿ ಸಾಗುತ್ತಿದೆ.

ಪ್ರಸ್ತುತ ಶಾಲೆಯಲ್ಲಿ ಔಷಧ ವನದೊಂದಿಗೆ ಸುಂದರವಾದ ತಕ್ಷಶಿಲಾ ಕುಟೀರವಿದ್ದು ಇಲ್ಲಿ ಪಠ್ಯತೇರ ಚಟುವಟಿಕೆಗಳು ನಡೆಯುತ್ತಾ ಇರುತ್ತವೆ. ಸುಮಾರು 2.8 ಎಕರೆ ವಿಸ್ತೀರ್ಣ ಹೊಂದಿರುವ ಶಾಲೆಯು ಬಹುತೇಕ ಜಾಗವನ್ನು ಕೃಷಿ ಚಟುವಟಿಕೆಗೆಂದೇ ಮೀಸಲಿರಿಸಿದೆ. ವಿಶೇಷತೆಯೆಂದರೆ ಸುಮಾರು 100ಕ್ಕೂ ಅಧಿಕ ಅಡಕೆ ಮರಗಳನ್ನು ಹೊಂದಿದ್ದು, ಬಹುತೇಕ ಅಡಕೆ ಮರದಲ್ಲಿ ಫಸಲು ನಳನಳಿಸುತ್ತಿವೆ. ಜತೆಗೆ 40ಕ್ಕೂ ಅಧಿಕ ತೆಂಗಿನ ಮರಗಳನ್ನೂ ಇಲ್ಲಿ ಬೆಳೆಸಲಾಗಿದೆ. ಇದರೊಂದಿಗೆ ಗೇರು ಗಿಡಗಳನ್ನು ಹೊಂದಿದ್ದು, ಇವುಗಳಿಂದ ವರ್ಷಕ್ಕೆ ಐದೂ ಸಾವಿರಕ್ಕೂ ಅಧಿಕ ಆದಾಯ ಬರುತ್ತಿದೆ. ಅಡಕೆಯಿಂದಲೂ ಆದಾಯ ಬರುತ್ತಿದ್ದು, ಅದನ್ನು ಗೊಬ್ಬರ ಇನ್ನಿತರ ಕೆಲಸಗಳಿಗೆ ಬಳಕೆ ಮಾಡಲಾಗುತ್ತಿದೆ.

ಉಳಿದಂತೆ ಶಾಲಾ ತೋಟದಲ್ಲಿ ಹಣ್ಣಿನ ಮರಗಿಡಗಳಾದ ನೆಲ್ಲಿ, ಹಲಸು, ಬಾಳೆ, ನೇರಳೆ, ಬಾದಾಮಿ, ಚಿಕ್ಕು, ಚರ‍್ರಿ, ಲಕ್ಷ್ಮಣ ಫಲ ಮುಂತಾದ ಹಣ್ಣಿನ ಗಿಡಮರಗಳಿವೆ. ಶಾಲಾ ಅಕ್ಷರದಾಸೋಹಕ್ಕೆ ಬೇಕಾದ ತರಕಾರಿ ಗಿಡ, ಬಳ್ಳಿಗಳಾದ ಬಸಳೆ, ಅಲಸಂಡೆ, ಬದನೆ, ಕೋಸುಗಡ್ಡೆ, ತೊಂಡೆ, ಹಾಗಲಕಾಯಿ, ಹೀಗೆ ಹತ್ತು ಹಲವು ವಿಧದ ತರಕಾರಿಗಳನ್ನು ಬೆಳೆಸಲಾಗಿದೆ. ಒಟ್ಟಾರೆಯಾಗಿ ಶಾಲಾ ಸುತ್ತಮುತ್ತಲ ಪರಿಸರ ಹಣ್ಣಿನ ಗಿಡಮರ, ತರಕಾರಿ ಗಿಡಗಳಿಂದ ಆವೃತವಾಗಿದೆ. ಇಲ್ಲಿ ಕಾಲ ಕಾಲಕ್ಕೆ ಪ್ಲಾಂಟೇಷನ್ ಮಾಡಲಾಗುತ್ತದೆ.

ವರ್ಷಕ್ಕೆ ಎರಡು ಬಾರಿ ಶ್ರಮದಾನ ಮಾಡಲಾಗುತ್ತಿದೆ. ಅದಲ್ಲದೆ ತೋಟಗಳಿಗೆ ಸ್ಪಿಂಕ್ಲರ್​ ಅಳವಡಿಸಲಾಗಿದ್ದು, ಮಕ್ಕಳು ಪ್ರತೀ ದಿನ ಬೆಳಿಗ್ಗೆ ಗಿಡ- ಮರಗಳಿಗೆ ನೀರುಣಿಸುವ ಕೆಲಸ ಮಾಡುತ್ತಾರೆ. ರಜಾ ಸಮಯಗಳಲ್ಲಿ ಎಸ್​ಡಿಎಂಸಿ ಹಾಗೂ ಪೋಷಕರು ಈ ಕೆಲಸ ಮಾಡುತ್ತಾರೆ. ಜತೆಗೆ ಔಷಧೀಯ ಗಿಡಗಳನ್ನು ನೆಟ್ಟು ಅದರ ವೈಜ್ಞಾನಿಕ ಹೆಸರುಗಳ ಫಲಕಗಳನ್ನು ಹಾಕಲಾಗಿದೆ.

ಕೃಷಿ ಪ್ರಶಸ್ತಿ: ಕಳೆದ ಬಾರಿ ಕೊಳ್ನಾಡುನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಾಥಮಿಕ ಶಾಲಾ ವಿಭಾಗದ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಯನ್ನೂ ಈ ಶಾಲೆ ಪಡೆದುಕೊಂಡಿದೆ. ಶಾಲೆಯ ಮುಖ್ಯ ಶಿಕ್ಷಕಿ ಶುಭಲತಾ ಹಾರಾಡಿ ಮಾತನಾಡಿ,

’’ಆನಡ್ಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕೆಲಸ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿದ್ದು ಸಂತೋಷ ಆಗುತ್ತಿದೆ. ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ ಎಂಬುದು ನಮ್ಮ ಶಾಲೆಯ ಧ್ಯೇಯವಾಕ್ಯ. ಹಾಗೆ ಶಾಲೆಯನ್ನು ಸ್ವಚ್ಛ, ಸುದಂರ, ಹಸಿರು ಪರಿಸರವನ್ನಾಗಿ ಇಟ್ಟುಕೊಂಡಿದ್ದೇವೆ. ಇಲ್ಲಿ ಅಡಿಕೆ, ತೆಂಗು ಸೇರಿ ವಿವಿಧ ರೀತಿಯ ಹಣ್ಣಿನ ಮರಗಳಿವೆ. ನಾವು ಈ ಮರಗಳಲ್ಲಿ ಬೆಳೆದ ಹಣ್ಣನ್ನು ಮಕ್ಕಳಿಗೆ ಹಂಚುತ್ತೇವೆ. ನಮ್ಮ ಶಾಲೆಯ ಮಕ್ಕಳು ಶಿಕ್ಷಣ ಸೇರಿದಂತೆ ಕ್ರೀಡೆ ಮತ್ತು ಪ್ರತಿಭಾ ಕಾರಂಜಿಯಲ್ಲಿ ತಾಲೂಕು, ಜಿಲ್ಲಾ ಮಟ್ಟದ ವರೆಗೂ ತಲುಪಿದ್ದಾರೆ‘‘ ಎಂದು ತಿಳಿಸಿದರು.

ವಿದ್ಯಾರ್ಥಿನಿ ಪ್ರೀತಿ ಮಾತನಾಡಿ,

’’ನಾವು ಶಾಲೆಯಲ್ಲಿ ಗಿಡಗಳಿಗೆ ನೀರು ಹಾಕುವುದು, ಗಿಡ ನೆಡುವುದು ಮಾಡುತ್ತೇವೆ. ಇಲ್ಲಿ ಬೆಳೆಯುವ ಹಣ್ಣುಗಳು ಶಾಲೆಯ ಪ್ರತಿ ವಿದ್ಯಾರ್ಥಿಗೂ ಸಿಗುತ್ತದೆ. ನೆಲ್ಲಿಕಾಯಿ, ನೇರಳೆ, ಪೇರಳೆ ಬೆಳೆಯಲಾಗಿದೆ. ಬಾಳೆಹಣ್ಣು ನಮಗೆ ಪ್ರತೀ ದಿನ ಸಿಗುತ್ತದೆ. ಇಲ್ಲಿ ಬೆಳೆಯುವ ತರಕಾರಿಗಳಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತದೆ‘‘ ಎಂದು ಹೇಳಿದರು.

ಇದನ್ನೂ ಓದಿ:ಮಲೆನಾಡಿನ ಶಿಕ್ಷಕಿ ಫೌಜಿಯ ಸರವತ್​ಗೆ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ

Last Updated : Sep 5, 2023, 6:53 PM IST

ABOUT THE AUTHOR

...view details