ಕರ್ನಾಟಕ

karnataka

ETV Bharat / state

ಗ್ಯಾರಂಟಿ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆದಲ್ಲಿ ಏಜೆನ್ಸಿ ಕಪ್ಪು ಪಟ್ಟಿಗೆ: ದಿನೇಶ್ ಗುಂಡೂರಾವ್ - ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್

ಗ್ಯಾರಂಟಿ ಯೋಜನೆಯ ಅರ್ಜಿ ಸಲ್ಲಿಕೆಗೆ ಹಣ ಪಡೆದರೆ ಏಜೆನ್ಸಿಯನ್ನು ಬ್ಲಾಕ್ ಲಿಸ್ಟ್​ಗೆ ಒಳಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್​ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.

ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

By

Published : Jun 23, 2023, 10:53 PM IST

ಕೆಡಿಪಿ ಪ್ರಥಮ ತ್ರೈಮಾಸಿಕ ಸಮೀಕ್ಷಾ ಸಭೆ

ಮಂಗಳೂರು : ಗ್ಯಾರಂಟಿ ಯೋಜನೆಯ ಅರ್ಜಿ ಸಲ್ಲಿಕೆಯು ಸಂಪೂರ್ಣ ಉಚಿತವಾಗಿದೆ. ಯೋಜನೆಗೆ ಅರ್ಜಿದಾರರಿಂದ ಹಣ ಪಡೆದಲ್ಲಿ ಏಜೆನ್ಸಿಗಳನ್ನು ಬ್ಲಾಕ್ ಲಿಸ್ಟ್​ಗೆ ಒಳಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಇಂದು ನಡೆದ ಕೆಡಿಪಿ ಪ್ರಥಮ ತ್ರೈಮಾಸಿಕ ಸಮೀಕ್ಷಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ನೂತನ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಒನ್ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿಯೊಂದಕ್ಕೆ ಸರ್ಕಾರವೇ 20 ರೂ. ಅನ್ನು ಗ್ರಾಮ ಒನ್‌ಗೆ ಪಾವತಿಸುತ್ತದೆ. ಆದರೆ ಅರ್ಜಿದಾರರಿಂದ 50 ರೂ. ಪಡೆಯಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್‌ ಸಭೆಯಲ್ಲಿ ಆಕ್ಷೇಪಿಸಿದರು. ಈ ಹಿನ್ನೆಲೆಯಲ್ಲಿ ಸಚಿವರು ಈ ಎಚ್ಚರಿಕೆ ನೀಡಿದರು.

ಜಿಲ್ಲೆಗೊಂದು ಗೋಶಾಲೆ ನಿರ್ಮಾಣದ ಕುರಿತು ಪ್ರಗತಿ ಪರಿಶೀಲನೆ ವೇಳೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಗೋವುಗಳ ಸಂರಕ್ಷಣೆಗೆ ಬಂದಿರುವ ಅನುದಾನ, ಯೋಜನೆಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು ದ.ಕ. ಜಿಲ್ಲೆಯಲ್ಲಿ 20 ಗೋಶಾಲೆಗಳಿವೆ. ಇದರಲ್ಲಿ 17 ಖಾಸಗಿ, 2 ಧಾರ್ಮಿಕ ದತ್ತಿ ಇಲಾಖೆ ಹಾಗೂ ಒಂದು ಪಶು ಇಲಾಖೆಯ ಗೋಶಾಲೆಗಳಿವೆ. ಜಿಲ್ಲೆಯಲ್ಲಿ 107 ಕ್ಲಿನಿಕ್‌ಗಳಿದ್ದು, 74 ಮಂದಿ ವೈದ್ಯರಲ್ಲಿ 28 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 5 ವರ್ಷದಲ್ಲಿ ಹೊಸ ಪಶುವೈದ್ಯರ ನೇಮಕವಾಗಿಲ್ಲ ಎಂದರು.

ಕೆಡಿಪಿ ಪ್ರಥಮ ತ್ರೈಮಾಸಿಕ ಸಮೀಕ್ಷಾ ಸಭೆ

ಗೋವುಗಳ ತುರ್ತು ಚಿಕಿತ್ಸೆಗೆ ಪಶು ಸಂಜೀವಿನಿ ಯೋಜನೆಯಡಿ ಒದಗಿಸಲಾದ ಆ್ಯಂಬುಲೆನ್ಸ್‌ಗಳ ಬಗ್ಗೆ ಯು.ಟಿ. ಖಾದರ್ ವಿಚಾರಿಸಿದರು‌. ದಕ್ಷಿಣ ಕನ್ನಡ ಜಿಲ್ಲೆಗೆ 9 ಆ್ಯಂಬುಲೆನ್ಸ್‌ಗಳು ಮಂಜೂರಾಗಿದ್ದು, ಇದರ ನಿರ್ವಹಣೆಯನ್ನು ಏಜೆನ್ಸಿಯೊಂದಕ್ಕೆ ಟೆಂಡರ್ ನೀಡಲಾಗಿದೆ. ಆದರೆ ಈವರೆಗೆ ಚಾಲಕರ ನೇಮಕವಾಗಿಲ್ಲ ಎಂಬ ಉತ್ತರ ಅಧಿಕಾರಿಗಳಿಂದ ಬಂತು. ಈ ಉತ್ತರದಿಂದ ಅಸಮಾಧಾನಗೊಂಡ ಖಾದರ್ ಅವರು, ಮನುಷ್ಯರಂತೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಅವುಗಳ ಹೆಸರಿನಲ್ಲಿ ಯೋಜನೆ ತಯಾರಿಸಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಏನು ಪ್ರಯೋಜನ?. ಈ ಬಗ್ಗೆ ವಿಸ್ತೃತ ವರದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಒದಗಿಸುವಂತೆ ತಾಕೀತು ಮಾಡಿದರು.

ಶಿಷ್ಟಾಚಾರ ಉಲ್ಲಂಘನೆ ಆರೋಪ: ದ.ಕ. ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಜಿಲ್ಲೆಯ ಬಿಜೆಪಿ ಶಾಸಕರು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾರು ಯಾರೋ ಬಂದು ವೇದಿಕೆಯಲ್ಲಿ ಕೂರುತ್ತಾರೆ. ಮಾಜಿ ಶಾಸಕರುಗಳು ವೇದಿಕೆಗೆ ಬಂದು ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಶಾಸಕರು ಇರುವಾಗ ಯಾರೋ ಬಂದು ಕೂರುವುದು ಎಷ್ಟು ಸರಿ?. ಕೆಲ ಮಾಜಿ ಶಾಸಕರು ಅಧಿಕಾರಿಗಳಿಗೆ ಮುಜುಗರ ಆಗೋ ರೀತಿ ಮಾಡ್ತಾರೆ ಎಂದು ಶಿಷ್ಟಾಚಾರ ಉಲ್ಲಂಘನೆ ವಿರುದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸಭೆಗಳಿಗೆ ನಮ್ಮನ್ನು ಕರೆಯದೇ ಯಾರನ್ನೋ ಕರೆಯುತ್ತಾರೆ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್ ರಿಂದಲೂ ಆಕ್ರೋಶ ವ್ಯಕ್ತವಾಯ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗುಂಡೂರಾವ್, ಕಾರ್ಯಕ್ರಮಕ್ಕೆ ಕರೆದಾಗ ಶಾಸಕರು ಬನ್ನಿ. ಶಿಷ್ಟಾಚಾರ ಪ್ರಕಾರ ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕು ಎಂದು ತಿಳಿಸಿ ಶಾಸಕರನ್ನ ಅಗತ್ಯವಾಗಿ ಆಹ್ವಾನಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:ಬಿಜೆಪಿ ರಾಜ್ಯಾಧ್ಯಕ್ಷರಾಗುವ ವಿ.ಸೋಮಣ್ಣರ ಅಪೇಕ್ಷೆ ತಪ್ಪೇನಿಲ್ಲ: ಕಟೀಲ್

ABOUT THE AUTHOR

...view details