ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಗಡಿಭಾಗದ ಅಡ್ಯನಡ್ಕ ಎಂಬಲ್ಲಿ ಸಂಘಟನೆಯೊಂದು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಶೈಕ್ಷಣಿಕ ಕಾರ್ಯಾಗಾರ ವಿವಾದಕ್ಕೆ ಕಾರಣವಾಗಿದ್ದು ಪೊಲೀಸ್ ಠಾಣೆ ಮೆಟ್ಟಲೇರಿದ್ದಲ್ಲದೇ, ವಿಧಾನಸಭೆಯಲ್ಲೂ ವಿಷಯ ಪ್ರಸ್ತಾಪವಾಯಿತು.
ನುಸ್ರುತುಲ್ ಇಸ್ಲಾಮಿಕ್ ಯಂಗ್ ಮೆನ್ಸ್ ಅಸೋಸಿಯೇಶನ್ (ಎನ್.ಐ.ವೈ.ಎ.) ಶೈಕ್ಷಣಿಕ ಕಾರ್ಯಕ್ರಮವೊಂದನ್ನು ಫೆಬ್ರವರಿ 18ರಂದು ಅಡ್ಯನಡ್ಕದ ಹಾಲ್ವೊಂದರಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಅಡ್ಯನಡ್ಕದ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲಿಗೆ ತೆರಳಿದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಒಂದು ಧರ್ಮದ ಬಗ್ಗೆ ಮತಪ್ರವಚನ ಮಾಡಲಾಗಿದೆ ಎಂಬ ಕುರಿತು ಸುದ್ದಿ ಹರಡಿದ್ದು, ಈ ಕುರಿತು ವಿದ್ಯಾರ್ಥಿಗಳು ನೀಡಿದ ಮಾಹಿತಿಯನ್ವಯ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಆಗಮಿಸಿದ್ದರು.
'ನಮಗೆ ಅಲ್ಲಿಗೆ ತೆರಳಲು ಇಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಶಾಲಾ ಪ್ರಾಂಶುಪಾಲರು ಕಳುಹಿಸಿದ್ದಾರೆ ಎಂದು ಕೆಲ ವಿದ್ಯಾರ್ಥಿಗಳು ಆಪಾದಿಸಿದ್ದಾರೆ ಎಂಬ ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರು, ಸ್ಥಳಕ್ಕಾಗಮಿಸಿ ಕಾರ್ಯಕ್ರಮ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಅದೇ ದಿನ ರಾತ್ರಿ ಈ ವಿಚಾರವಾಗಿ ಹಿಂದೂ ಕಾರ್ಯಕರ್ತರು, ಮುಖಂಡರಾದ ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ವಿಟ್ಲ ಪೊಲೀಸ್ ಠಾಣೆಗೆ ತೆರಳಿ ಇದಕ್ಕೆಲ್ಲಾ ಪ್ರಾಂಶುಪಾಲರು ಕಾರಣ ಎಂದು ದೂರಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನು, ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದು, ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದೆ. ನಿಯೋಗದಲ್ಲಿ ಬಿಜೆಪಿ ಸ್ಥಳೀಯ ಮುಖಂಡರಾದ ಅರುಣ್ ವಿಟ್ಲ, ಹರಿಪ್ರಸಾದ್, ಕೇಪು ಗ್ರಾಪಂ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು:ಇನ್ನೊಂದೆಡೆ, ಫೆ.18 ರ ರಾತ್ರಿ ಕೇಪು ಗ್ರಾಮದ ಮಾಧವ ಮೂಲ್ಯ ಎಂಬುವರು ವಿಟ್ಲ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ. ಫೆ.18ರಂದು ಸಂಜೆ 5.30 ಕ್ಕೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಧಾರ್ಮಿಕ ಸಂಘಟನೆಯೊಂದರ ಖಾಸಗಿ ಹಾಲ್‌ಗೆ ಜನತಾ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯಕ್, ರಫೀಕ್ ಮಾಸ್ಟರ್ ಆತೂರ್ ಹಾಗೂ ನುಸ್ರುತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯಷನ್ ಸಂಘಟನಾಕಾರರು ಶಾಲೆಯ ವಿಧ್ಯಾರ್ಥಿಗಳನ್ನು ಶೈಕ್ಷಣಿಕ ಕಾರ್ಯಾಗಾರದ ನೆಪದಲ್ಲಿ ಕರೆಸಿಕೊಂಡು ಹೋಗಿ, ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದು ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.