ಬಂಟ್ವಾಳ: ಎಂಸಿಎಫ್ ಸಹಭಾಗಿತ್ವದಲ್ಲಿ ಬಂಟ್ವಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಶೀಘ್ರದಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಈ ಕುರಿತು ಸುದ್ದಿಗಾರರಿಗೆ ತಿಳಿಸಿದರು. ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಬಂಟ್ವಾಳ ತಾಲೂಕಿನಲ್ಲಿ ಯಾವುದೇ ಆಕ್ಸಿಜನ್ ಸಮಸ್ಯೆ ಉಂಟಾಗದಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಎಂಸಿಎಫ್ ಸಹಯೋಗದೊಂದಿಗೆ ನಿಮಿಷಕ್ಕೆ 80 ಲೀಟರ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯದ ಘಟಕ ಸ್ಥಾಪನೆಗೊಳ್ಳಲಿದ್ದು, ಶೀಘ್ರವೇ ಕೆಲಸ ಪ್ರಾರಂಭಗೊಳ್ಳಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮತ್ತು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ ಅವರೊಂದಿಗೆ ಸ್ಥಳ ಪರಿಶೀಲನೆ ಬಳಿಕ ತಿಳಿಸಿದರು.
ಇದನ್ನೂ ಓದಿ:'ಕೊರೊನಾ ಸೋಂಕಿನ ರಿಸಲ್ಟ್ ಶೀಘ್ರದಲ್ಲಿ ನೀಡಲು ಯಂತ್ರ ಅಳವಡಿಕೆ'
ಈಗಾಗಲೇ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 25 ಆಕ್ಸಿಜನ್ಯುಕ್ತ ಬೆಡ್ಗಳು ಸಿದ್ಧವಾಗಿವೆ. ಇನ್ನೂ ಹೆಚ್ಚುವರಿಯಾಗಿ 10 ಆಕ್ಸಿಜನ್ ಬೆಡ್ಗಳು ಸಿದ್ಧವಾಗುತ್ತಿವೆ. ತಾಲೂಕಿನ ವಾಮದಪದವು ಆಸ್ಪತ್ರೆಯ 30 ಬೆಡ್ಗಳಲ್ಲಿ 12 ಬೆಡ್ಗಳನ್ನು ಸೋಂಕಿತರಿಗೆ ಮೀಸಲಿಡಲಾಗಿದೆ. ಅದನ್ನು 20ಕ್ಕೆ ಏರಿಕೆ ಮಾಡಿ ಎಲ್ಲಾ ಬೆಡ್ಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.