ಮಂಗಳೂರು : ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷ, ತನ್ನ ಗ್ಯಾರಂಟಿ ಘೋಷಣೆಗಳನ್ನು ಮುಂದುವರೆಸಿದೆ. ಇಂದು ಮಂಗಳೂರಿನಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ 5ನೇ ಗ್ಯಾರಂಟಿ ಘೋಷಣೆಯನ್ನು ನೀಡಿದರು. ಕಾಂಗ್ರೆಸ್ ಪಕ್ಷ ಗೆದ್ದು ಬಂದರೆ ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ನಲ್ಲಿ ಉಚಿತ ಪ್ರಯಾಣ ಸೇವೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ನಮ್ಮ ಸರ್ಕಾರ ಬಂದ ಮೊದಲ ದಿನದ ಮೊದಲ ಕ್ಯಾಬಿನೆಟ್ ನಲ್ಲಿ ನಾಲ್ಕು ಭರವಸೆಗಳನ್ನು ಮಾತ್ರವಲ್ಲ, ಐದು ಭರವಸೆಗಳನ್ನು ಈಡೇರಿಸುತ್ತೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೆ ಕಿವಿಗೊಟ್ಟಿ ಕೇಳಿ. ನಾವು ನಾಲ್ಕನೆ ಭರವಸೆಯ ಜೊತೆಗೆ ಮಹಿಳೆಯರಿಗಾಗಿ ಹೊಸ ಭರವಸೆ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಅವಧಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣವನ್ನು ನೀಡುತ್ತೇವೆ ಎಂದರು.
ಕೆಲವು ವರ್ಷಗಳಿಂದ ಇಲ್ಲಿ ಬಿಜೆಪಿ ಸರ್ಕಾರ ಇದೆ. ಈ ಸರ್ಕಾರವನ್ನು ನೀವು ನಿಮ್ಮ ಮತದಿಂದ ಆಯ್ಕೆ ಮಾಡಿಲ್ಲ. ಬಿಜೆಪಿ ಅವರು ಕಳ್ಳತನದಿಂದ ಪ್ರಜಾಪ್ರಭುತ್ವ ಧ್ವಂಸ ಮಾಡಿದ್ದು, ಭ್ರಷ್ಟಾಚಾರದ ಹಣದಿಂದ ಖರೀದಿ ಮಾಡಿ ತಮ್ಮ ಸರ್ಕಾರ ರಚಿಸಿದ್ದಾರೆ. ಅವರಿಗೆ ಕಳ್ಳತನ ಮಾಡುವುದು ಅಭ್ಯಾಸ ಆಗಿದೆ. ಇವರ ಕೈಯಲ್ಲಿ ಎಂಎಲ್ಎ, ಕಂಟ್ರಾಕ್ಟರ್ ಗಳ ಹಣ, ಸುಗರ್ ಫ್ಯಾಕ್ಟರಿ ಕಳ್ಳತನ ಮಾಡುವುದು ಅಭ್ಯಾಸವಾಗಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
ಒಬ್ಬ ಬಿಜೆಪಿ ನಾಯಕ ಹೇಳುತ್ತಾರೆ. ಕರ್ನಾಟಕವನ್ನು ಮೋದಿ ಕೈಯಲ್ಲಿ ಕೊಡುವ ಸರ್ಕಾರ ಎನ್ನುತ್ತಾರೆ. ಈಗಲೂ ಬಿಜೆಪಿ ಕೈಯಲ್ಲಿದೆ. ನಿಮಗೆ 40% ಭ್ರಷ್ಟಾಚಾರದ ಸರ್ಕಾರ ಬೇಡ. ಎಲ್ಲಾ ವಿಚಾರದಲ್ಲಿಯೂ 40 % ಭ್ರಷ್ಟಾಚಾರ ಇವರು ಮಾಡುತ್ತಾರೆ. ಬಿಜೆಪಿ ಶಾಸಕರೇ ಹೇಳಿದ್ದರು ಬಿಜೆಪಿಯಿಂದ ಸಿಎಂ ಆಗಲು 2500 ಕೋಟಿ ರೂ. ಕೇಳಿದ್ದರು ಎಂದು. ಇದೀಗ ಖರೀದಿ ಮಾಡಿದವರ ಅಸಲಿಯತ್ತು ಗೊತ್ತಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.