ಕರ್ನಾಟಕ

karnataka

ETV Bharat / state

ರೈತರಿಂದ ಜಿಡಿಪಿಗೆ ಶೇ.18 ಕೊಡುಗೆ, ಅನ್ನದಾತರ ಕಲ್ಯಾಣಕ್ಕೆ ಸರ್ಕಾರ ಬದ್ಧ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ - etv bharat kannada

ಪುತ್ತೂರಿನಲ್ಲಿ 5ನೇ ಬೃಹತ್ ಕೃಷಿ ಯಂತ್ರ ಮೇಳ ಮತ್ತು ಕನಸಿನ ಮನೆ- ಕಾರ್ಯಕ್ರಮಕ್ಕೆ ಶೋಭಾ ಕರಂದ್ಲಾಜೆ ಚಾಲನೆ- ಮೂರು ದಿನಗಳ ಕಾಲ ನಡೆಯಲಿರುವ ಕೃಷಿ ಯಂತ್ರ ಮೇಳ

puttur
5ನೇ ಬೃಹತ್ ಕೃಷಿ ಯಂತ್ರ ಮೇಳ

By

Published : Feb 11, 2023, 7:17 AM IST

Updated : Feb 11, 2023, 8:08 AM IST

ಪುತ್ತೂರಿನಲ್ಲಿ 5ನೇ ಬೃಹತ್ ಕೃಷಿ ಯಂತ್ರಮೇಳ ಮತ್ತು ಕನಸಿನ ಮನೆ

ಪುತ್ತೂರು(ದಕ್ಷಿಣ ಕನ್ನಡ): ಕ್ಯಾಂಪ್ಕೋ ಲಿಮಿಟೆಡ್, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್​ ಟೆಕ್ನಾಲಜಿ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ 5ನೇ ಬೃಹತ್ ಕೃಷಿ ಯಂತ್ರ ಮೇಳ ಮತ್ತು ಕನಸಿನ ಮನೆ ಕಾರ್ಯಕ್ರಮಕ್ಕೆ ಪುತ್ತೂರು ನೆಹರುನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಕೃಷಿ ಯಂತ್ರ ಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, "ದೇಶದ ಜಿಡಿಪಿಯಲ್ಲಿ ಶೇ.18 ರಷ್ಟು ರೈತರದ್ದೇ ಕೊಡುಗೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ತೆರೆದಿರುವ ಕೃಷಿಯಂತ್ರ ಬಾಡಿಗೆ ಕೇಂದ್ರಗಳಲ್ಲಿ ರೈತರಿಗೆ ನೀಡುವ ಕೃಷಿ ಸಲಕರಣೆಗಳಿಗೆ ಹೆಚ್ಚಿನ ಸಬ್ಸಿಡಿ ಜೊತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಯನ್ನು ಸರ್ಕಾರದ ವತಿಯಿಂದ ತಯಾರಿಸಲಾಗಿದೆ" ಎಂದು ತಿಳಿಸಿದರು.

"ಪ್ರಸ್ತುತ ಸನ್ನಿವೇಶದಲ್ಲಿ ಎತ್ತುಗಳನ್ನು ಬಳಸಿ ಹೂಳುವ ಪರಿಸ್ಥಿತಿ ಇಲ್ಲ, ಎಲ್ಲವೂ ಬದಲಾಗಿದೆ. ಕೃಷಿಕರಿಗೆ ಕೃಷಿಯಂತ್ರವೇ ಪ್ರಮುಖವಾಗಿದೆ. ದೇಶದಾದ್ಯಂತ ಒಟ್ಟು ರೈತರ ಪೈಕಿ ಸಣ್ಣ ಮತ್ತು ಅತೀ ಸಣ್ಣ ರೈತರ ಸಂಖ್ಯೆ ಜಾಸ್ತಿಯಿದ್ದು, ಕೃಷಿಕರಿಗೆ ಯಂತ್ರೋಪಕರಣಗಳ ಕುರಿತು ಜಾಗೃತಿ ಆಂದೋಲನ ಮಾಡಲಾಗುತ್ತಿದೆ. ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆಯುವ ಯೋಜನೆಯನ್ವಯ ಹೋಬಳಿ ಕೇಂದ್ರದಲ್ಲಿ ಕಸ್ಟಮರಿಂಗ್ ಕೇಂದ್ರ ತೆರೆಯಲಾಯಿತು. ಈ ಪೈಕಿ ಕೇವಲ 80 ಸಾವಿರ ಕೋಟಿ ಟ್ರಾಕ್ಟರ್‌ಗೆ ಹೋಗುತ್ತಿದೆ. ಉಳಿದದ್ದಕ್ಕೆ 4 ಸಾವಿರ ಕೋಟಿ ಹೋಗುತ್ತದೆ. ಈ ನಿಟ್ಟಿನಲ್ಲಿ ಸಬ್ಸಿಡಿ ವಿಚಾರದಲ್ಲಿ ಹೊಸ ಮಾರ್ಗಸೂಚಿಗಳನ್ನು ತಯಾರಿಸಲಾಗಿದೆ" ಎಂದು ಹೇಳಿದರು.

ಪುತ್ತೂರಿನಲ್ಲಿ 5ನೇ ಬೃಹತ್ ಕೃಷಿ ಯಂತ್ರಮೇಳ ಮತ್ತು ಕನಸಿನ ಮನೆ

ಇದನ್ನೂ ಓದಿ:ಕ್ಯಾಂಪ್ಕೋವನ್ನೂ ಗುಜರಾತಿ ಬಂಡವಾಳಶಾಹಿಗಳೊಂದಿಗೆ ಮರ್ಜ್‌ ಮಾಡದಿದ್ದರೆ ಸಾಕು: ವಿಶ್ವನಾಥ ರೈ

"ಹಿಂದಿನಿಂದಲೂ ಕುಚ್ಚಲು ಅಕ್ಕಿಯನ್ನು ಬಳಸುತ್ತಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕುಚ್ಚಲು ಅಕ್ಕಿ ಬೆಳೆಯದ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಹವಾಮಾನವಾದರೂ ಅದಕ್ಕೆ ಹೊಂದಿಕೊಂಡು ಬೆಳೆಯುವ ಭತ್ತ, ಹಣ್ಣುಗಳು ಸೇರಿದಂತೆ ಸುಮಾರು 1500 ಜಾತಿಯ ಬೆಳೆಗಳನ್ನು ಕಂಡು ಹಿಡಿಯಲಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಸಂಶೋಧನೆಗೆ ಹೆಚ್ಚಿನ ಅನುದಾನ, ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ" ಎಂದರು.

"ಒಂದೆಡೆ ಅಡಿಕೆಗೆ ರೋಗ ಬಾಧಿಸಿದ್ದು, ಇನ್ನೊಂದೆಡೆ ಅಡಿಕೆ ಹಾನಿಕಾರಕ ಎಂಬ ವಿಷಯವು ತೀರ್ಪಿಗಾಗಿ ಸುಪ್ರೀಂ ಕೊರ್ಟಿನಲ್ಲಿದೆ. ಈ ಕುರಿತು ಪ್ರಧಾನಮಂತ್ರಿ ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದೇನೆ. ಹೀಗಾಗಿ ಅಡಕೆ ಹಾನಿಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸಲು ಪ್ರಧಾನಿ ಮೋದಿಯರು ಒಳ್ಳೆಯ ವಕೀಲರ ತಂಡವನ್ನು ನೇಮಿಸಿ ಅಡಿಕೆ ಬೆಳೆಯನ್ನು ರಕ್ಷಿಸುವತ್ತ ಹೊರಟಿದ್ದಾರೆ" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕೊಡ್ಗಿ, ಕ್ಯಾಂಪ್ಕೋ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಎಂ.ಕೃಷ್ಣ ಕುಮಾರ್, ಕಾಸರಗೋಡು ಐಸಿಎಆರ್-ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಮಂಗಳೂರು ವಿವಿ ಉಪಕುಲಪತಿ ಡಾ.ಪಿ.ಎಸ್.ಸುಬ್ರಹ್ಮಣ್ಯ ಎಡಪಡಿತ್ತಾಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಕ್ಯಾಂಪ್ಕೋ ಉಪಾಧ್ಯಕ್ಷ ಶಂಖರನಾರಾಯಣ ಖಂಡಿಗೆ, ಜನರಲ್ ಮ್ಯಾನೇಜರ್​ ರೇಶ್ಮಾ ಮಲ್ಯ, ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಆಡಳಿತ ಮಂಡಳಿ ನಿರ್ದೇಶಕ ರವಿಕೃಷ್ಣ ಡಿ.ಕಲ್ಲಾಜೆ, ಕೃಷ್ಣಪ್ರಸಾದ್ ಮಡ್ತಿಲ, ಶಂಬುಲಿಂಗ ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಂ ಸರಳಾಯ, ಪದ್ಮರಾಜ್ ಪಟ್ಟಾಜೆ, ರಾಘವೇಂದ್ರ ಭಟ್, ರಾಧಾಕೃಷ್ಣ ಕೆ, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ, ರಾಘವೇಂದ್ರ ಎಚ್.ಎಂ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಹ್ಮಣ್ಯ ಭಟ್ ಟಿ.ಎಸ್. ಉಪಸ್ಥಿತರಿದ್ದರು.

ಇದನ್ನೂ ಓದಿ:ಫೆ.11ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ಭಾರತ ಮಾತಾ ಮಂದಿರ ಉದ್ಘಾಟನೆ..

Last Updated : Feb 11, 2023, 8:08 AM IST

ABOUT THE AUTHOR

...view details