ದಕ್ಷಿಣ ಕನ್ನಡ (ಪುತ್ತೂರು):ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ರಾಜ್ಯದ ಹಲವು ಜನರು ನೆರೆಯ ರಾಜ್ಯಗಳಲ್ಲಿ ಸಿಲುಕಿದ್ದಾರೆ. ಇದೀಗ ಪುತ್ತೂರಿನ ಇಬ್ಬರು ಯುವಕರು ಗುಜರಾತ್ನಲ್ಲಿ ಸಿಲುಕಿದ್ದು, ಕಳೆದ 21 ದಿನಗಳಿಂದ ತಮ್ಮ ಕಾರಿನಲ್ಲಿಯೇ ಉಳಿಯುವ ಪರಿಸ್ಥಿತಿ ಬಂದೊದಗಿದೆ.
ಗುಜರಾತ್ನಲ್ಲಿ ಸಿಲುಕಿದ ಪುತ್ತೂರಿನ ಯುವಕರು: ಲಾಕ್ಡೌನ್ನಿಂದ ಕಾರಿನಲ್ಲಿಯೇ ಯಾತನೆ ವೃತ್ತಿಯಲ್ಲಿ ಅಡಕೆ ಸುಫಾರಿ ವ್ಯಾಪಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಪುತ್ತೂರಿನ ಯುವಕರಿಬ್ಬರು ಕಳೆದ 21 ದಿನಗಳಿಂದ ಗುಜರಾತ್ನ ಚೆಕ್ಪೋಸ್ಟ್ ಬಳಿ ಕಾರೊಂದರಲ್ಲಿ ಅನಾಥ ಬದುಕು ಸಾಗಿಸುತ್ತಾ ಆತಂಕದಲ್ಲಿ ದಿನದೂಡುತ್ತಿದ್ದಾರೆ.
ಲಾಕ್‌ಡೌನ್ ಜಾರಿಗೊಳ್ಳುವ ಎರಡು ದಿನಗಳ ಮೊದಲು ಗುಜರಾತ್ ರಾಜ್ಯದ ರಾಜ್‌ಕೋಟಾದಿಂದ ನಿಸ್ಸಾನ್ ಮೈಕ್ರಾ ಕಾರಲ್ಲಿ ಪುತ್ತೂರಿಗೆ ಹೊರಟಿದ್ದ ಇವರು ಸುಮಾರು 500 ಕಿ.ಮೀ. ದೂರ ಪ್ರಯಾಣ ಮಾಡಿದ್ದರು.
ಗುಜರಾತ್ನ ವಲ್ಸಾಡ್ ಜಿಲ್ಲೆಯ ಅಂಬರ್‌ಗಾವ್ ಭಿಲಾಡ್ ತಾಲೂಕಿನ ಚೆಕ್ ಪೋಸ್ಟ್ ಬಳಿ ಅವರು ಸಿಲುಕಿದ್ದು, ಅತ್ತ ವಾಪಸ್ ಹೋಗಲಾರದೆ ಇತ್ತ ತಮ್ಮ ಊರಾದ ಪುತ್ತೂರಿಗೂ ಬರಲಾಗದೆ ಪರದಾಡುತ್ತಿದ್ದಾರೆ.
ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಆಶಿಕ್ ಹುಸೈನ್ ಹಾಗೂ ಕೆಮ್ಮಿಂಜೆ ಗ್ರಾಮದ ನಿವಾಸಿ ಮೊಹಮ್ಮದ್ ತಾಕೀನ್ ಮರೀಲ್ ಎಂಬುವವರು ಇದೀಗ ತಮ್ಮ ದಿನದ ಬಹುಭಾಗವನ್ನು ಕಾರಿನೊಳಗೆಯೇ ಕಳೆಯುತ್ತಿದ್ದಾರೆ. ಈ ನಡುವೆ ಸ್ಥಳೀಯರ ಸಹಾಯದಿಂದ ಊಟೋಪಚಾರ ದೊರೆತಿದ್ದರೂ, ಊರಿಗೆ ಬರಲಾಗದೆ ಕಾಲ ಕಳೆಯುವಂತಾಗಿದೆ.
ಸದ್ಯ ಈ ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಗಮನ ಸೆಳೆದಿದ್ದು, ಈ ಇಬ್ಬರಿಗೆ ಊಟದ ವ್ಯವಸ್ಥೆಯೂ ಸೇರಿ ಸೂಕ್ತ ವಸತಿ ಒದಗಿಸುವಂತೆ ಗುಜರಾತ್ನ ವೆಲ್ಸಾಡ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.