ಚಿತ್ರದುರ್ಗ:ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ತಾಲೂಕುಗಳಲ್ಲಿ ಕಳೆದ ಮೂರು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದ ವೇದಾವತಿ ನದಿ ಮೈದುಂಬಿ ಹರಿಯುತ್ತಿರುವುದರಿಂದ, ಹಿರಿಯೂರು ನಗರ ವ್ಯಾಪ್ತಿಯಲ್ಲಿ ನದಿ ಪಾತ್ರದ ನಿವಾಸಿಗಳನ್ನು ಸ್ಥಳಾಂತರಿಸುವಂತೆ ಹಿರಿಯೂರು ತಹಶಿಲ್ದಾರ್ ಸತ್ಯನಾರಾಯಣ ಸೂಚಿಸಿದ್ದಾರೆ.
ಮೈದುಂಬಿ ಹರಿಯುತ್ತಿರುವ ವೇದಾವತಿ: ನದಿ ಪಾತ್ರದ ಜನರ ಸ್ಥಳಾಂತರಕ್ಕೆ ತಹಶಿಲ್ದಾರ್ ಸೂಚನೆ
ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ವೇದಾವತಿ ನದಿ ಮೈದುಂಬಿ ಹರಿಯುತ್ತಿದೆ. ಹೀಗಾಗಿ ನದಿ ಪಾತ್ರದ ನಿವಾಸಿಗಳನ್ನು ಸ್ಥಳಾಂತರಿಸುವಂತೆ ಹಿರಿಯೂರು ತಹಶಿಲ್ದಾರ್ ಸತ್ಯನಾರಾಯಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಾಣಿವಿಲಾಸ ಸಾಗರಕ್ಕೆ ಭಾರಿ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಕಳೆದ ರಾತ್ರಿ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ ಹಿರಿಯೂರು ತಹಶಿಲ್ದಾರ್ ಸತ್ಯನಾರಾಯಣ ಮತ್ತು ನಗರಸಭೆ ಪೌರಾಯುಕ್ತ ಮಹಾಂತೇಶ್, ಮಟನ್ ಮಾರ್ಕೆಟ್ ಹಿಂಭಾಗ, ಕಟುಕರ ಹಳ್ಳ, ಸಿಳ್ಳೆಕ್ಯಾತರು, ಬೀದಿ ನಿವಾಸಿಗಳನ್ನು ತಕ್ಷಣ ಸ್ಥಳಾಂತರಿಸುವಂತೆ ಆದೇಶ ನೀಡಲಾಗಿದೆ. ಅಲ್ಲದೆ, ಹಿರಿಯೂರು ನಗರದಲ್ಲಿರುವ ಗುರುಭವನದಲ್ಲಿ ನಿರಾಶ್ರಿತರಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ.
ವಾಣಿವಿಲಾಸ ಸಾಗರ ಅಣೆಕಟ್ಟೆಯ ನಾಲೆಗಳು, ಚೆಕ್ ಡ್ಯಾಂಗಳು ಕೋಡಿ ಬಿದ್ದಿರುವುದರಿಂದ ನದಿ ಪಾತ್ರದಲ್ಲಿ ಹೆಚ್ಚಾಗಿ ನೀರು ಹರಿಯುತ್ತಿದೆ.