ಚಿತ್ರದುರ್ಗ:ವೀರ್ ಸಾವರ್ಕರ್ ಬಗ್ಗೆ ಮತನಾಡುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲಾ ಪಂಚಾಯತ್ ಕೆಡಿಪಿ ಸಭೆ ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ, ಮುಂಚಿನಿಂದಲೂ ಅದೇ ಸಂಪ್ರದಾಯದಲ್ಲಿ ಅವರು ಬೆಳೆದು ಬಂದಿದ್ದಾರೆ. ಗಾಂಧಿ ಹತ್ಯೆಗೈದಿದ್ದ ಗೋಡ್ಸೆಗೆ ವೀರ್ ಸಾವರ್ಕರ್ ಕುಮ್ಮಕ್ಕು ನೀಡಿದ್ದರು. ಅಂತವರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಬಾರದು ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರು ವೀರ್ ಸಾವರ್ಕರ್ ಬಗ್ಗೆ ಓದಿಕೊಂಡ ಬಳಿಕ ಈ ರೀತಿ ಮಾತನಾಡಲಿ. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದು ಅಥವಾ ಬಿಡುವುದು ಕೇಂದ್ರ ಸರ್ಕಾರ ಬಿಟ್ಟಿರುವ ವಿಚಾರ ಎಂದು ಶ್ರೀರಾಮುಲು ಹೇಳಿದ್ರು.
ಸಾವರ್ಕರ್ ಅವರಿಗೆ ಭಾರತರತ್ನ ನೀಡಬಾರದು ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಸಚಿವ ಶ್ರೀರಾಮುಲು ಕಿಡಿ ಸಿದ್ದರಾಮಯ್ಯ ವೀರ್ ಸಾವರ್ಕರ್ ಬಗ್ಗೆ ಮಾತನಾಡುತ್ತಿದ್ದರಲ್ಲ, ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ರವರಿಗೆ ಭಾರತ ರತ್ನ ನೀಡಿದ್ರಾ ಎಂದು ಸಿದ್ದರಾಮಯ್ಯನವರಿಗೆ ಪ್ರಶ್ನಿಸಿದರು. ಅಂಬೇಡ್ಕರ್ ಅವರನ್ನು ಭಾರತ ರತ್ನ ಪ್ರಶಸ್ತಿಯಿಂದ ದೂರ ಇಟ್ಟವರಿಗೆ ಮಾತನಾಡಲು ಏನು ನೈತಿಕತೆ ಇದೆ. ಭಾರತ ರತ್ನ ಪ್ರಶಸ್ತಿಯನ್ನು ವೀರ್ ಸಾವರ್ಕರ್ ರೊಂದಿಗೆ ಸಿದ್ದಗಂಗಾ ಶ್ರೀ ಹಾಗು ಪುಟ್ಟರಾಜ್ ಗವಾಯಿಗಳಿಗೂ ನೀಡಬೇಕೆಂದು ಕೇಂದ್ರಕ್ಕೆ ಇದೇ ವೇಳೆ ಸಚಿವ ಶ್ರೀರಾಮುಲು ಒತ್ತಾಯಿಸಿದರು.
ನಳೀನ್ ಕುಮಾರ್ ಕಟೀಲ್ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ರಿಮೋಟ್ ಕಂಟ್ರೋಲ್ ಇದ್ದಂತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಶ್ರೀರಾಮುಲು, ಸಿದ್ದರಾಮಯ್ಯ ಅವರೇನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧೀಯವರ ರಿಮೋಟ್ ಕಂಟ್ರೋಲಾ ಎಂದು ಗುಡುಗಿದರು.