ಚಿತ್ರದುರ್ಗ: ಜಿಲ್ಲೆಯಲ್ಲಿ ಭೀಕರ ಬರ ತಾಂಡವಾಡುತ್ತಿದೆ. ಜಿಲ್ಲೆಯಾದ್ಯಂತ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ನಡುವೆ ಲೋಕಸಭಾ ಚುನಾವಣೆ ಬಂದಿದ್ದರಿಂದ ನೀತಿ ಸಂಹಿತೆ ನೆಪವೊಡ್ಡಿ ಬೇಜವಾಬ್ದಾರಿ ಮೆರೆದಿದ್ದ ಅಧಿಕಾರಿಗಳಿಗೆ ಜಿಲ್ಲೆಯ ಶಾಸಕರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳು ಗರಂ ಚಿತ್ರದುರ್ಗದಲ್ಲಿ ನಡೆದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆಯಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಕುಡಿಯುವ ನೀರಿಗಾಗಿ ಬೋರ್ವೆಲ್ ಕೊರೆಸಿದ್ರೆ ಯಾರ ಅನುಮತಿ ಪಡೆದು ಕಾಮಗಾರಿ ಮಾಡಿದ್ದೀರಾ ಎಂದು ಅಧಿಕಾರಿಗಳು ಎಲ್ಲಾ ಕೆಲಸಗಳಿಗೂ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ಸಿಗ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಇದಕ್ಕೆ ಧ್ವನಿಗೂಡಿಸಿದ ಮೊಳಕಾಲ್ಮೂರು ಶಾಸಕ ಶ್ರೀರಾಮುಲು, ನನ್ನ ಕ್ಷೇತ್ರದಲ್ಲೂ ಅಧಿಕಾರಿಗಳು ಕಾಮಗಾರಿಗಳನ್ನೇ ನಿಲ್ಲಿಸಿದ್ದಾರೆ. ಮತ ಹಾಕಿದ ಜನರಿಗಾಗಿ ನಾವು ಏನೂ ಕೆಲಸ ಮಾಡಿಸೋಕೆ ಆಗ್ತಿಲ್ಲ. ನೀವು ರಾಜಕೀಯ ಮಾಡೋಕೆ ಬಂದಿದ್ದೀರಾ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ್ರು.
ಇನ್ನು ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಳಿಕ ಮೊದಲ ತ್ರೈಮಾಸಿಕ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನಗಳು ಎಲ್ಲೂ ಸದುಪಯೋಗ ಆಗಿಲ್ಲ. ಎಲ್ಲದಕ್ಕೂ ಮಿಗಿಲಾಗಿ ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು. ಕೆಲವೆಡೆ ಜನರ ಒತ್ತಾಯಕ್ಕೆ ಮಣಿದು ಜನಪ್ರತಿನಿಧಿಗಳು ಕಾಮಗಾರಿ ಮಾಡಲು ಹೇಳಿರುತ್ತಾರೆ. ಆದರೆ ಅಧಿಕಾರಿಗಳು ನೀವೇ ಸುಪ್ರೀಂ ಅನ್ನೋ ತರ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜನಪ್ರತಿನಿಧಿಗಳು ಹೇಳಿರುವ ಕಾಮಗಾರಿಗಳಿಗೆ ಎದುರು ಮಾತನಾಡದೆ ಹಣ ಮಂಜೂರು ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.