ಚಿತ್ರದುರ್ಗ:ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಹೃದಯ, ಕಣ್ಣು ಎಲ್ಲಿ ಇದೆಯೋ ಗೊತ್ತಿಲ್ಲ. ಕಣ್ಣಿದ್ದೂ ಕುರುಡರಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಕೊರೊನಾ ವಿಚಾರದಲ್ಲಿ ರಾಜಕೀಯ ಸರಿಯಲ್ಲ: ಡಿಕೆಶಿಗೆ ಸಚಿವ ಈಶ್ವರಪ್ಪ ತಿರುಗೇಟು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊರೊನಾ ವಿಚಾರವಾಗಿ ನೀಡಿದ್ದ ಹೇಳಿಕೆಗೆ ಸಚಿವ ಈಶ್ವರಪ್ಪ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಅವರಿಗೆ ಕಣ್ಣು, ಹೃದಯ ಇದಿಯೋ ಇಲ್ಲವೋ ಗೊತ್ತಿಲ್ಲ. ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ನಿನ್ನೆ ಮೊನ್ನೆ ಅಧ್ಯಕ್ಷರಾದ ಡಿಕೆಶಿ ಕೊರೊನಾ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ತಪ್ಪು ಮಾಹಿತಿ ನೀಡಿ ರಾಜ್ಯದ ಜನರಿಗೆ ಮೋಸ ಮಾಡಬಾರದು ಎಂದು ಟಾಂಗ್ ನೀಡಿದರು.
ಇನ್ನು ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ ಸರ್ಕಾರದ ನಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮದ್ಯ ಮಾರಾಟ ಅವಶ್ಯಕತೆ ಇದೆಯೋ ಇಲ್ಲವೋ ಹೇಳುವಷ್ಟು ದೊಡ್ಡವ ನಾನಲ್ಲ. ಕೇಂದ್ರ ಸರ್ಕಾರದ ಸೂಚನೆಯನ್ನು ಪಾಲಿಸಲಾಗುತ್ತಿದ್ದು, ಮಠಾಧೀಶರು ಮದ್ಯ ಮಾರಾಟದ ಬಗ್ಗೆ ವಿರೋಧಿಸುತ್ತಿದ್ದಾರೆ. ಅದರೆ ಸರ್ಕಾರ ಆದಾಯದ ಮೂಲವನ್ನೂ ನೋಡಬೇಕಾಗುತ್ತದೆ ಎಂದರು.