ಚಿತ್ರದುರ್ಗ:ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗಕ್ಕೆ ಸಂಬಂಧಿಸಿದಂತೆ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಕಾವು ಹೆಚ್ಚಾಗಿದೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ ಶ್ರೀನಿವಾಸ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಬಿಜೆಪಿಗೆ ತಲೆಬಿಸಿಯಾಗಿ ಪರಿಣಮಿಸಿದೆ.
ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಬಿಜೆಪಿ ಆಗ್ನೇಯ ಪದವೀಧರರ ಕ್ಷೇತ್ರದ ಪ್ರಚಾರ ಆರಂಭಿಸಲಾಯಿತು. ಹಿರಿಯೂರು ನಗರದಲ್ಲಿರುವ ತುಳಸಿ ನಾರಾಯಣ್ ರಾವ್ ಕಲ್ಯಾಣ್ ಮಂಟಪದಲ್ಲಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರದ ಸಭೆಯಲ್ಲಿ ಸಮಾಜಕಲ್ಯಾಣ ಸಚಿವ ಸಚಿವ ಶ್ರೀ ರಾಮುಲು ಭಾಗಿಯಾಗಿ ಮತಯಾಚಿಸಿದರು.
ಇಂದು ನಡೆದ ಪ್ರಚಾರ ಸಭೆಯಲ್ಲಿ ಶಾಸಕಿ ಪೂರ್ಣಿಮಾ ಗೈರಾಗಿದ್ದು, ಬಿಜೆಪಿಯಲ್ಲಿ ಎಲ್ಲಾ ಸರಿ ಇಲ್ಲ ಎಂಬುದು ಎದ್ದು ಕಾಣುತ್ತಿತ್ತು. ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ ಶ್ರೀನಿವಾಸ್ ಕೂಡ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಬಿಜೆಪಿ ಪಕ್ಷ ಮಾತ್ರ ಚಿದಾನಂದ ಗೌಡ ಎಂಬ ಅಭ್ಯರ್ಥಿಗೆ ಮಣೆ ಹಾಕಿರುವುದರಿಂದ ಚುನಾವಣೆಯಿಂದ ಶಾಸಕಿ ಪೂರ್ಣಿಮಾ ದೂರ ಉಳಿದಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.