ಕರ್ನಾಟಕ

karnataka

ETV Bharat / state

ಕೋಟೆನಾಡಲ್ಲಿ ತಲೆದೋರಿದ ಭೀಕರ ಕ್ಷಾಮ : ಹಲವು ಹಳ್ಳಿಗಳಲ್ಲಿ ಕುಡಿವ ನೀರಿಗೆ ಹಾಹಾಕಾರ - ಅಂತರ್ಜಲ

ಬರದ ಬರಸಿಡಿಲಿಗೆ ಬಲಿಯಾಗಿರುವ ಚಿತ್ರದುರ್ಗದಲ್ಲಿ ಕುಡಿಯುವ ನೀರಿನ ಬವಣೆ ಹೇಳತೀರದಾಗಿದೆ. ಜಿಲ್ಲಾಡಳಿತ ಕೂಡ ಕೈ ಕಟ್ಟಿ ಕುಳಿತುಕೊಳ್ಳದೇ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್​ಗಳ ಮೂಲಕ ನೀರು ಪೂರೈಸುತ್ತಿದೆ. ಇಷ್ಟಾದ್ರೂ ನೀರಿನ ಸಮಸ್ಯೆ ಮಾತ್ರ ಬಗೆಹರಿಯದೆ ಹಾಗೇ ಉಳಿದಿರುವುದಂತೂ ಸುಳ್ಳಲ್ಲ.

ಕುಡಿಯುವ ನೀರು ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಾರ್ವಜನಿಕರು

By

Published : May 4, 2019, 3:33 PM IST

ಚಿತ್ರದುರ್ಗ: ಸದಾ ಬರಗಾಲದಿಂದ ಕಂಗ್ಗೆಟ್ಟ ಕೋಟೆನಾಡು ಚಿತ್ರದುರ್ಗದಲ್ಲಿ ಕುಡಿವ ನೀರಿಗೆ ಹಾಹಾಕಾರ ಎದುರಾಗಿದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್ ವೆಲ್ ನೀರು ಕೂಡ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೈರಾಣಾಗಿರುವ ಕೆಲ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದು, ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿ ಕುಡಿಯಲು ನೀರು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿ ಜಲ ಮೂಲಗಳು ಸಂಪೂರ್ಣವಾಗಿ ಬತ್ತಿಹೋಗಿವೆ. ಕೆರೆಕಟ್ಟೆಗಳಲ್ಲಿ ಹನಿ ನೀರಿಲ್ಲದೇ ಜನರನ್ನು ಚಿಂತಿಗೀಡು ಮಾಡಿದೆ. ಅತ್ತ ಮಳೆ ಬೆಳೆ ಇಲ್ಲದೆ ರೈತರು ಕಗ್ಗೆಟ್ಟರೇ ಇತ್ತ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೂರಿದೆ.

ಚಿತ್ರದುರ್ಗ ತಾಲೂಕಿನ ಕೂಗಳತೆಯಲ್ಲಿರುವ ಬೆಳಗಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಾದ ಹಾಯ್ಕಲ್, ಕೋಟೆಹಟ್ಟಿ, ಚಿನ್ನೂರು, ತಿಪ್ಪಯ್ಯನ ಹಟ್ಟಿ, ಹಾಯ್ಕಲ್ ಗೊಲ್ಲರಹಟ್ಟಿ, ಹಳೇಚೂರಿ ಪಾಪಯ್ಯನ ಹಟ್ಟಿ ಹಾಗೂ ಹೊಸಚೂರಿ ಪಾಪಯ್ಯನಹಟ್ಟಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ಈ ಎಲ್ಲಾ ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದ್ದರಿಂದ ಕುಡಿವ ನೀರಿನ ಸಮಸ್ಯೆ ಉಲ್ಭಣಿಸಿದ್ದು, ಜಿಲ್ಲಾಡಳಿತದಿಂದ ಟ್ಯಾಂಕರ್ ಮೂಲಕ ನೀರನ್ನು ಪ್ರತಿ ಹಳ್ಳಿಗಳಿಗೆ ರವಾನಿಸಲಾಗುತ್ತಿದೆ

ಕೆಲ ಹಳ್ಳಿಗಳಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಬಿಲ್​ಗಳಾಗಿಲ್ಲ ಎಂದು ಟ್ಯಾಂಕರ್ ಚಾಲಕರು ನೀರು ಪೂರೈಸುವುದನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ನೀರಿನ ಸಮಸ್ಯೆ ವಿಪರೀತವಾಗಿದೆ. ಇದರಿಂದ ಬೆಳಗಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಳ್ಳಿಯ ಗ್ರಾಮಸ್ಥರು ನೀರಿಗಾಗಿ ಕೊಡಗಳನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲೇರಿದ್ದು, ನೀರು ಹರಿಸುವಂತೆ ಮನವಿ ಮಾಡಿದ್ದಾರೆ.

ಕುಡಿಯುವ ನೀರು ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸಾರ್ವಜನಿಕರು

ವಾಣಿವಿಲಾಸ ಸಾಗರದಲ್ಲಿ ನೀರು ಕುಸಿತ ಕಂಡಿದ್ದರಿಂದ ನಗರ ಪ್ರದೇಶದಲ್ಲೂ ಕೂಡ ನೀರಿನ ಸಮಸ್ಯೆ ಎದುರಾಗಿದೆ. 15 ರಿಂದ 20 ದಿನಗಳಿಗೊಮ್ಮೆ ಕುಡಿವ ನೀರನ್ನು ಪೂರೈಸಲಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ನಗರಸಭೆ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿವೆ. ಇನ್ನೂ ನಗರ ಪ್ರದೇಶದಲ್ಲಿ ಜನರು 750 ರೂಪಾಯಿಯಂತೆ ಒಂದು ಟ್ಯಾಂಕ್ ನೀರು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರಾದ ಭಾಗ್ಯಮ್ಮ.

ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತ ಖಾಸಗಿ ಬೋರ್ ವೆಲ್​ಗಳನ್ನು ಸುಪರ್ದಿಗೆ ಪಡೆದು ನೀರನ್ನು ಪೂರೈಸುವ ಕ್ರಮಕ್ಕೆ ಮುಂದಾಗಿದೆ. ಚಿತ್ರದುರ್ಗ ತಾಲೂಕಿನ ಕೆ ಬಳ್ಳಕಟ್ಟೆ ಗ್ರಾಮದಲ್ಲಿ ಮನೆಗೆ ತಲಾ 300 ರೂ ಚಂದ ಎತ್ತಿ ಬೋರ್ ವೆಲ್ ಕೊರೆಸಿದ್ದಾರೆ. ತಾಲೂಕಿನ 29 ಹಳ್ಳಿಗಳಿಗೆ 40 ಟ್ಯಾಂಕರ್ ಮೂಲಕ 108 ಟ್ರಿಪ್​ಗಳಲ್ಲಿ ನೀರು ಕೊಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.

ಒಟ್ಟಾರೆ ಬರದ ಸಿಡಿಲಿಗೆ ಬಲಿಯಾಗಿರುವ ಚಿತ್ರದುರ್ಗದಲ್ಲಿ ಕುಡಿವ ನೀರಿನ ಬವಣೆ ಹೇಳತೀರದಾಗಿದೆ. ಜಿಲ್ಲಾಡಳಿತ ಕೂಡ ಕೈ ಕಟ್ಟಿ ಕುಳಿತುಕೊಳ್ಳದೆ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್​ಗಳ ಮೂಲಕ ನೀರನ್ನು ರವಾನೆ ಮಾಡುತ್ತಿದೆ. ಇಷ್ಟಾದ್ರೂ ನೀರಿನ ಸಮಸ್ಯೆ ಮಾತ್ರ ಬಗೆಹರಿಯದ ಹಾಗೇ ಉಳಿದಿರುವುದಂತೂ ಸುಳ್ಳಲ್ಲ.

ABOUT THE AUTHOR

...view details