ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲೂ ಗಣಿಗಾರಿಕೆಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಜನರಿಗೆ ಅಪಾಯ ತಂದೊಡ್ಡುತ್ತಿವೆ. ಇದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಹೊಣೆ ಎಂದು ಜನತೆ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಮಹಾನ್ ವ್ಯಕ್ತಿ ಸ್ಮಾರಕ ಗಣಿಗಾರಿಕೆ ಪಿಡುಗು ತಟ್ಟಿದೆ ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗ ಹೊರವಲಯದಲ್ಲಿರುವ ಸೀಬಾರ ಗ್ರಾಮದ ಬಳಿ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಸ್ಮಾರಕವಿದೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಗಣಿಗಾರಿಕೆಯ ಕೆಟ್ಟ ಪರಿಣಾಮ ಸ್ಮಾರಕಕ್ಕೂ ತಟ್ಟಿದೆ ಅನ್ನೋ ಗಂಭೀರ ಆರೋಪ ಕೇಳಿ ಬರ್ತಿದೆ. ರಾಷ್ಟ್ರೀಯ ಹೆದ್ದಾರಿ 04 ಪಕ್ಕದ ದಿ. ಎಸ್ ನಿಜಲಿಂಗಪ್ಪ ಸ್ಮಾರಕ ಸ್ಥಳದ ಆಧಾರ ಸ್ತಂಭಗಳು ಹಾಗೂ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ.
ನಿರಂತವಾಗಿ ಬೆಟ್ಟಗಳಲ್ಲಿ, ಕಲ್ಲಿನ ಕ್ವಾರಿಗಳಲ್ಲಿ ಗಣಿಗಾರಿಕೆ ನಡೆಸುವ ಗುತ್ತಿಗೆದಾರರು ಸ್ಟೋನ್ ಬ್ಲಾಸ್ಟಿಂಗ್ ನಡೆಸುತ್ತಿರುವ ಪರಿಣಾಮ ಕೆಲವು ಬಾರಿ ಸ್ಮಾರಕ ಸ್ಥಳ ಅದುರಿದಂತಾಗುತ್ತಿದೆ ಎಂದು ಸ್ಮಾರಕ ಟ್ರಸ್ಟ್ ಮುಖಂಡರು ಗಣಿಗಾರಿಕೆ ಗುತ್ತಿಗೆದಾರ ವಿರುದ್ಧ ಕಿಡಿಕಾರುತ್ತಿದ್ದಾರೆ. ಇತ್ತ ಸ್ಮಾರಕಕ್ಕೆ ಬೆನ್ನೆಲುಬಾದ ಚಾವಣಿ ಕಂಬದಲ್ಲಿ ಬಿರುಕುಗಳು ಕಾಣಿಸಿಕೊಳ್ಳುವ ಕಾರಣ ಗಣಿಗಾರಿಕೆಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾಡಳಿತಕ್ಕೆ ಟ್ರಸ್ಟ್ ಮುಖಂಡರು ಆಗ್ರಹಿಸುತ್ತಿದ್ದಾರೆ.
ಸ್ಮಾರಕದತ್ತ ಬರಲು ಜನರು ಹಿಂದೇಟು?
ಸ್ಮಾರಕದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮಾಹಿತಿ ಪ್ರಕಾರ ಚಾವಣಿ ಕಂಬಗಳಲ್ಲಿ ಹಾಗೂ ಪಕ್ಕದ ಕೋಣೆಗಳ ಗೋಡೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿರುವ ಪರಿಣಾಮ ಜನರು ಸ್ಮಾರಕದತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.