ಕರ್ನಾಟಕ

karnataka

ಕುರಿ ಕಾಯುತ್ತಿದ್ದ ಬಾಲಕನನ್ನು ಮರಳಿ ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Sep 12, 2023, 8:17 PM IST

Updated : Sep 12, 2023, 9:16 PM IST

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕುರಿ ಕಾಯುತ್ತಿದ್ದ ಬಾಲಕನನ್ನು ಶಾಲೆಗೆ ಸೇರಿಸಲು ಸಿಎಂ ಸಿದ್ದರಾಮಯ್ಯ ನೆರವಾಗಿದ್ದಾರೆ.

cm-siddaramaiah-sent-the-boy-back-to-school-who-was-tending-sheep
ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಸಾಪುರದ ಬಾಲಕನೊಬ್ಬ ಶಾಲೆಗೆ ಹೋಗದೇ ಕುರಿ ಕಾಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಬಾಲಕನನ್ನು ಮತ್ತೆ ಶಾಲೆಗೆ ಸೇರಲು ನೆರವಾಗಿದ್ದಾರೆ. ಬಸಾಪುರ ಗ್ರಾಮದ ಯೋಗೇಶ್ ಎಂಬ ಬಾಲಕನನ್ನು ಮರಳಿ ಶಾಲೆಗೆ ಸೇರಿಸಲಾಗಿದೆ. ಈತನನ್ನು ತಂದೆ ತಾಯಿ ಒತ್ತಾಯಪೂರ್ವಕವಾಗಿ ಶಾಲೆ ಬಿಡಿಸಿ ಕಳೆದ 2 ವರ್ಷದಿಂದ ಕುರಿ ಮೇಯಿಸಲು ಕಳುಹಿಸಿದ್ದರು.

ಈ ಬಗ್ಗೆ ಸ್ಥಳೀಯರಾದ ಮಹೇಂದ್ರ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಅದನ್ನು 'CM of Karnataka' ಎಕ್ಸ್​ (ಹಿಂದಿನ ಟ್ವಿಟರ್​) ಖಾತೆಗೆ ಟ್ಯಾಗ್ ಮಾಡಿದ್ದರು. ಇದನ್ನು ಗಮನಿಸಿದ ಮುಖ್ಯಮಂತ್ರಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಬಾಲಕನ ಮನೆಗೆ ಕಳುಹಿಸಿ, ಆತನ ತಂದೆ ತಾಯಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿದ್ದಾರೆ. ಬಳಿಕ ಕೇವಲ 24 ಗಂಟೆಗಳ ಒಳಗೆ ಬಾಲಕನನ್ನು ಶಾಲೆಗೆ ಸೇರ್ಪಡೆ ಮಾಡಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈಗ ಯೋಗೇಶ್​ಗೆ ಬಸಾಪುರ ಗ್ರಾಮದ ಸರಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದಲು ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, "ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಬಸಾಪುರದ ಯೋಗೇಶ್‌ ಎಂಬ ಬಾಲಕನನ್ನು ಆತನ ತಂದೆ ತಾಯಿ ಒತ್ತಾಯಪೂರ್ವಕವಾಗಿ ಶಾಲೆ ಬಿಡಿಸಿ ಕಳೆದ 2 ವರ್ಷದಿಂದ ಕುರಿ ಮೇಯಿಸಲು ತೊಡಗಿಸಿದ್ದರು. ಈ ವಿಚಾರವು ಸ್ಥಳೀಯರೊಬ್ಬರಿಂದ ನಮ್ಮ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಬಾಲಕನ ಮನೆಗೆ ಕಳುಹಿಸಿದೆವು. ಜೊತೆಗೆ ಆತನ ತಂದೆ ತಾಯಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿದೆ. ಕೇವಲ 24 ಗಂಟೆಗಳ ಒಳಗೆ ಬಾಲಕನನ್ನು ಶಾಲೆಗೆ ಸೇರ್ಪಡೆ ಮಾಡಿಸಲಾಗಿದೆ. ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಿದ್ದ ಯೋಗೇಶ್‌ ಈಗ ಇತರ ಮಕ್ಕಳಂತೆ ಶಾಲೆಯಲ್ಲಿ ಕಲಿಯುತ್ತಾ, ನಲಿಯುತ್ತಾ ಉಜ್ವಲ ಭವಿಷ್ಯದೆಡೆಗೆ ಹೆಜ್ಜೆ ಹಾಕುತ್ತಿದ್ದಾನೆ."ಎಂದು ತಿಳಿಸಿದ್ದಾರೆ.

"ಬಾಲ್ಯದಲ್ಲಿ ನಾನು ಕೂಡ ಯೋಗೇಶ್​ನಂತೆ ಶಾಲೆಯಿಂದ ವಂಚಿತನಾಗಿದ್ದೆ. ರಾಜಪ್ಪ ಮೇಷ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ದಾಖಲಾತಿ ಮಾಡಿ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ಮರಳಿ ಶಿಕ್ಷಣದತ್ತ ಮುಖಮಾಡಿರುವ ಈ ಬಾಲಕನ ಭವಿಷ್ಯವೂ ಉಜ್ವಲವಾಗಲಿ ಎಂಬ ಹಾರೈಕೆ ನನ್ನದು. ಇಂತಹ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ @osd_cmkarnataka ಟ್ವಿಟರ್ ಖಾತೆಯನ್ನು ಸಂಪರ್ಕಿಸಿ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಅಪರೂಪದ ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು ಪತ್ತೆ

Last Updated : Sep 12, 2023, 9:16 PM IST

ABOUT THE AUTHOR

...view details