ಚಿತ್ರದುರ್ಗ: ತಾಲೂಕಿನ ಗ್ರಾಮವೊಂದರಲ್ಲಿ ನಡೆದ 13 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ಪತ್ತೆಯಾದ ಚಪ್ಪಲಿ ಹಾಗೂ ಸಮೀಪದಲ್ಲೇ ಇದ್ದ ಎಮ್ಮೆ ಆರೋಪಿಯ ಸುಳಿವು ನೀಡಿದೆ. ನಾಗರಾಜ ಅಲಿಯಾಸ್ ರಾಜ (24) ಬಂಧಿತ ಆರೋಪಿ.
ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಕೊಲೆಯಾದ ಬಾಲಕಿಯ ಪಕ್ಕದ ಮನೆ ನಿವಾಸಿಯಾದ ಆರೋಪಿ, ಜುಲೈ 23ರಂದು ಮಧ್ಯಾಹ್ನ ಕೃತ್ಯ ಎಸಗಿದ್ದನು. ಬಾಲಕಿಯನ್ನು ಕಾಪಾಡುವ ಪ್ರಯತ್ನದಲ್ಲಿ ಸಾಕ್ಷ್ಯಗಳು ನಾಶವಾಗಿದ್ದವು. ತಾಂತ್ರಿಕ ಸಾಕ್ಷ್ಯಗಳು ಇಲ್ಲದಿರುವುದರಿಂದ ತನಿಖೆ ಸವಾಲಾಗಿತ್ತು.
ಕೃತ್ಯ ನಡೆದ ಬಳಿಕ ಕೊಂಚವೂ ಅನುಮಾನ ಬಾರದಂತೆ ಮನೆಯಲ್ಲೇ ಇದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.
ಪ್ರಕರಣದ ತನಿಖೆ ಕುರಿತು ಜಿಲ್ಲಾ ಎಸ್ಪಿ ಮಾಹಿತಿ ನೀಡಿದರು ಪಕ್ಕದ ಮನೆಯ ಬಾಲಕಿ ಮೇಲೆ ಕಣ್ಣು:
ಸಂತ್ರಸ್ತ ಬಾಲಕಿಯ ಮನೆಯ ಪಕ್ಕದಲ್ಲೇ ಆರೋಪಿಯ ಮನೆಯಿದೆ. ತಾಯಿ ಹಾಗೂ ಅಣ್ಣನೊಂದಿಗೆ ವಾಸವಿರುವ ಈತ, ಎಮ್ಮೆ ಕಾಯುವ ಕೆಲಸ ಮಾಡಿಕೊಂಡಿದ್ದ. ಮೂರು ವರ್ಷಗಳಿಂದ ಗ್ರಾಮದ ಸಮುದಾಯ ಭವದಲ್ಲಿ ನೆಲೆಸಿರುವ ಸಂತ್ರಸ್ತ ಬಾಲಕಿಯ ಕುಟುಂಬ, ಸ್ನಾನಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿತ್ತು.
ಬಾಲಕಿಯ ಕುಟುಂಬಸ್ಥರು ವಾಸವಿರುವ ಸಮುದಾಯ ಭವನ ಇದಕ್ಕೆ ಹೊಂದಿಕೊಂಡಂತೆ ಆರೋಪಿಯ ಮನೆಯ ಶೌಚಾಲಯವಿದೆ. ಬಾಲಕಿ ಸ್ನಾನ ಮಾಡುವುದನ್ನು ಕದ್ದು ನೋಡಿ ಕಾಮುಕ ದೃಷ್ಟಿ ಬೀರುತ್ತಿದ್ದ ಆರೋಪಿ, ಅತ್ಯಾಚಾರ ನಡೆಸಲು ಹೊಂಚು ಹಾಕಿದ್ದ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಕಾಮಗಾರಿ ಪ್ರಗತಿಯಲ್ಲಿರುವ ಬಾಲಕಿಯ ಮನೆ ಬಹಿರ್ದೆಸೆಗೆ ಹೋದಾಗ ದುಷ್ಕೃತ್ಯ :
ಬಾಲಕಿ ಸಾಮಾನ್ಯವಾಗಿ ಒಬ್ಬಳೇ ಬಹಿರ್ದೆಸೆಗೆ ಹೋಗುತ್ತಿರಲಿಲ್ಲ. ತಂಗಿ ಅಥವಾ ತಾಯಿಯೊಂದಿಗೆ ತೆರಳುತ್ತಿದ್ದಳು. ಜುಲೈ 23ರಂದು ಮಧ್ಯಾಹ್ನ ಅವರಿಬ್ಬರೂ ಭರಮಸಾಗರಕ್ಕೆ ಹೋಗಿದ್ದರು. ಹೀಗಾಗಿ, ಬಾಲಕಿಯೊಬ್ಬಳೇ ಬಹಿರ್ದೆಸೆಗೆ ತೆರಳಿದ್ದಳು. ಎಮ್ಮೆ ಕಾಯಲು ಹೊರಟಿದ್ದ ಆರೋಪಿ ಇದನ್ನು ಗಮನಿಸಿದ್ದ. ಬಾಲಕಿ ಬಹಿರ್ದೆಸೆಗೆ ಕುಳಿತ ಸ್ಥಳದ ಸ್ವಲ್ಪ ದೂರದಲ್ಲಿ ಎಮ್ಮೆಗಳನ್ನು ಕಟ್ಟಿಹಾಕಿದ್ದ.
ಬಹಿರ್ದೆಸೆ ಮುಗಿಸಿ ಮನೆಗೆ ಮರಳಲು ಬಾಲಕಿ ಮುಂದಾದಾಗ ಏಕಾಏಕಿ ದಾಳಿ ನಡೆಸಿದ್ದಾನೆ. ಆಕೆ ಕಿರುಚದಂತೆ ಬಾಯಿ ಮುಚ್ಚಿ ಮೆಕ್ಕೆಜೋಳದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ವಿಷಯವನ್ನು ಬಾಯಿಬಿಡಬಹುದು ಎಂಬ ಆತಂಕದಿಂದ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿಯ ಕೊರಳು ಹಾಗೂ ಕೈ ಮೇಲೆ ಬಾಲಕಿ ಪರಚಿದ ಗುರುತುಗಳು ಇವೆ ಎಸ್ಪಿ ಹೇಳಿದ್ದಾರೆ.
ಆರೋಪಿಯ ಸುಳಿವು ನೀಡಿದ ಎಮ್ಮೆ, ಚಪ್ಪಲಿ :
ಕೃತ್ಯ ನಡೆದ ಸ್ಥಳದ ಸಮೀಪದಲ್ಲೇ ಎಮ್ಮೆ ಇದ್ದವು ಎಂಬುದರ ಬಗ್ಗೆ ಕೆಲವರು ಸುಳಿವು ನೀಡಿದ್ದರು. ಆರೋಪಿಯ ಮನೆಯ ಎಮ್ಮೆ, ಗ್ರಾಮದ ಇತರ ಮನೆಯ ಎಮ್ಮೆ ಹಾಗೂ ಗೂಗಲ್ ನೆರವಿನಿಂದ ಅಂತರ್ಜಾಲದಲ್ಲಿ ಸಿಗುವ ಎಮ್ಮೆ ಚಿತ್ರಗಳನ್ನು ಸಾಕ್ಷ್ಯ ನುಡಿದ ವ್ಯಕ್ತಿಗೆ ತೋರಿಸಿದೆವು. ಆರೋಪಿ ಮನೆಯ ಎಮ್ಮೆಯನ್ನೇ ಸಾಕ್ಷಿದಾರರು ಗುರುತಿಸಿದ್ದಾರೆ. ಘಟನೆ ನಡೆದ ಮರುದಿನವೇ ಆರೋಪಿಯ ಮೇಲೆ ನಿಗಾ ಇಡಲಾಗಿತ್ತು.
ಘಟನಾ ಸ್ಥಳದಲ್ಲಿ ದೊರೆತ ಚಪ್ಪಲಿಯ ಸುಳಿವು ಹಿಡಿದು ಪೊಲೀಸರ ತಂಡ ತನಿಖೆ ನಡೆಸಿತು. ಚಪ್ಪಲಿ ಅಂಗಡಿ ಹಾಗೂ ಗ್ರಾಮದ ಜನರ ಮಾಹಿತಿ ಆಧರಿಸಿ ಪತ್ತೆ ಮಾಡಲು ಪ್ರಯತ್ನಿಸಿದೆವು. ಚಪ್ಪಲಿಯ ಅಳತೆ ಆರೋಪಿಯ ಕಾಲಳತೆಗೆ ಸರಿ ಹೊಂದುವಂತಿತ್ತು. ಆರೋಪಿಯ ಎರಡು ಜೊತೆ ಚಪ್ಪಲಿಯಲ್ಲಿ ಒಂದು ಜೊತೆ ಇಲ್ಲದಿರುವುದು ಗೊತ್ತಾಯಿತು. ಇದೇ ಸಂದರ್ಭದಲ್ಲಿ ಉತ್ತರಪ್ರದೇಶದ ತಂಡವೊಂದು ಚಪ್ಪಲಿ ಮಾರಾಟ ಮಾಡಲು ಗ್ರಾಮಕ್ಕೆ ಭೇಟಿ ನೀಡಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗೆ ಚಪ್ಪಲಿ ನೀಡಿದ ಬಗ್ಗೆ ಮಾಹಿತಿ ಕೊಟ್ಟರು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಏನು ಗೊತ್ತಿಲ್ಲದಂತೆ ವರ್ತಿಸಿದ್ದ ಆರೋಪಿ
ಅತ್ಯಾಚಾರ, ಕೊಲೆ ನಡೆಸಿದ ಸ್ಥಳ ಕೆಸರಿನಿಂದ ಕೂಡಿತ್ತು. ಆರೋಪಿಯ ಬಟ್ಟೆ ಕೊಳೆಯಾದ ಸುಳಿವು ನೀಡಿತ್ತು. ಹೀಗಾಗಿ, ಕೃತ್ಯ ನಡೆದಂದು ರಾತ್ರಿ ಗ್ರಾಮದ ಪ್ರತಿ ಮನೆಗೆ ತೆರಳಿ ಪರಿಶೀಲನೆ ನಡೆಸಲಾಯಿತು. ಅನಾರೋಗ್ಯದ ನೆಪ ಹೇಳಿಕೊಂಡು ಆರೋಪಿ ಮನೆಯಲ್ಲೇ ಮಲಗಿದ್ದನು. ಮರುದಿನವೂ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದಾಗ ಆರೋಪಿ ಏನೂ ಗೊತ್ತಿಲ್ಲದಂತೆ ಇದ್ದನು. ಇದರಿಂದ ಯಾರೊಬ್ಬರೂ ಈತನ ಮೇಲೆ ಅನುಮಾನ ವ್ಯಕ್ತಪಡಿಸಿರಲಿಲ್ಲ. ಆದರೆ, ಪೊಲೀಸರ ತಂಡ ಆತನ ಮೇಲೆ ನಿಗಾ ಇಟ್ಟಿತ್ತು.
ಸಾಮಾನ್ಯವಾಗಿ ಇಂತಹ ಪೈಶಾಚಿಕ ಕೃತ್ಯ ನಡೆಸುವ ಮನಸ್ಥಿತಿ ವಿಕೃತವಾಗಿರುತ್ತದೆ. ಮಾದಕ ವಸ್ತು, ಮದ್ಯ ಸೇವನೆ ಮಾಡಿದಾಗ ಮಾತ್ರ ಹೀಗೆ ವರ್ತಿಸಲು ಸಾಧ್ಯ. ಈ ಆಯಾಮದಲ್ಲಿ ತನಿಖೆ ಆರಂಭಿಸಿದೆವು. ಇಸ್ಪಿಟ್ ದಂಧೆ ನಡೆಯುತ್ತಿದ್ದ ಸುಳಿವು ಆಧರಿಸಿದ ತನಿಖೆ ನಡೆಸಿದೆವು. ಆದರೆ, ಎಲ್ಲಿಯೂ ಪೂರಕ ಸಾಕ್ಷ್ಯಗಳು ಲಭ್ಯವಾಗಲಿಲ್ಲ.
ಜೀವ ಉಳಿಸುವ ಭರದಲ್ಲಿ ಸಾಕ್ಷಿ ನಾಶ :
ಕೃತ್ಯ ಎಸಗಿದ ಬಳಿಕ ಆರೋಪಿಯ ಬಟ್ಟೆಯೂ ಕೆಸರಾಗಿದ್ದವು. ಅಲ್ಲಿಂದ ನೇರವಾಗಿ ಮನೆಗೆ ಬಂದು ಬಟ್ಟೆ ತೆಗೆದು ಸ್ನಾನ ಮಾಡಿ ಕೃತ್ಯ ನಡೆದ ಸ್ಥಳಕ್ಕೆ ತೆರಳಿದನು. ಸಮೀಪದಲ್ಲೇ ಕಟ್ಟಿದ್ದ ಎಮ್ಮೆಯನ್ನು ಬಿಚ್ಚಿಕೊಂಡು ಹೋಗಿದ್ದಾನೆ. ಬಹಿರ್ದೆಸೆಗೆ ತೆರಳಿದ ಬಾಲಕಿ ಮನೆಗೆ ಮರಳದಿರುವುದರಿಂದ ಆತಂಕಗೊಂಡು ಆಕೆಯ ತಾಯಿ ಕೃತ್ಯ ನಡೆದ ಸ್ಥಳಕ್ಕೆ ತೆರಳಿದ್ದಾರೆ. ಪುತ್ರಿ ಬದುಕಿರಬಹುದು ಎಂಬ ಆಸೆಯಿಂದ ಬಾಲಕಿಯನ್ನು ಎತ್ತಿಕೊಂಡು ಮನೆಗೆ ತಂದು ಮುಖ ತೊಳೆದಿದ್ದಾರೆ. ಇದರಿಂದ ಅಗತ್ಯ ಸಾಕ್ಷ್ಯಗಳು ನಾಶವಾಗಿದ್ದವು ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.