ಹಿರಿಯೂರು:ನೂರಾರು ವರ್ಷಗಳ ಇತಿಹಾಸ ಹೊಂದಿದ್ದ ಶ್ರೀರಾಮನ ದೇವಸ್ಥಾನ ಧ್ವಂಸಗೊಳಿಸಿ, ಬೇರೆಡೆಗೆ ಎಸೆಯಲಾಗಿದ್ದ ವಿಗ್ರಹವೀಗ ವೇದಾವತಿ ನದಿಯಲ್ಲಿ ಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಕೂಡ್ಲಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಜಮೀನಿನಲ್ಲಿ ನೂರಾರು ವರ್ಷದ ಶ್ರೀರಾಮನ ದೇವಸ್ಥಾನವಿತ್ತು. ಈ ಜಮೀನನ್ನು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಖರೀದಿಸಿದ್ದರು.
ಆದರೆ, ಜಮೀನು ಮಾಲೀಕ ಕಳೆದ ನವೆಂಬರ್ 17 ರಂದು ದೇವಸ್ಥಾನವನ್ನು ನೆಲಸಮ ಮಾಡಿ, ದೇವರ ವಿಗ್ರಹವನ್ನು ವೇದಾವತಿ ನದಿಯಲ್ಲಿ ಬಿಸಾಡಿದ್ದ ಘಟನೆ ನಡೆದಿತ್ತು. ಈ ಘಟನೆಗೆ ಜಮೀನು ಮಾಲೀಕನ ವಿರುದ್ಧ ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಇನ್ನು ಬೆಂಗಳೂರಿನ ವಿಮಲ್ ರಾಜನ್ ಎಂಬುವ ವ್ಯಕ್ತಿ ರಾತ್ರೋರಾತ್ರಿ ದೇವಸ್ಥಾನವನ್ನು ಕೆಡವಿ ವಿಗ್ರಹವನ್ನು ವೇದಾವತಿ ನದಿಯಲ್ಲಿ ಬಿಸಾಡಿದ್ದರು ಎಂದು ಹೇಳಲಾಗಿತ್ತು.
ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹಿರಿಯೂರು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಜೈಲಿಗಟ್ಟಿದ್ದರು. ಪ್ರಕರಣವನ್ನು ಚುರುಕುಗೊಳಿಸಿದ ಪೊಲೀಸರು ಆರೋಪಿಯನ್ನು ತನಿಖೆಗೆ ಒಳಪಡಿಸಿ ಕೊನೆಗೂ ವಿಗ್ರಹವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ವೇದಾವತಿ ನದಿಯಲ್ಲಿ ವಿಗ್ರಹ ಇರುವುದು ಪತ್ತೆಯಾದ ಹಿನ್ನೆಲೆ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಆನಂದ್ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ಶ್ರೀರಾಮನ ವಿಗ್ರಹವನ್ನು ನದಿಯಿಂದ ಮೇಲೆ ತೆಗೆದು ಪೊಲೀಸ್ ಠಾಣೆಗೆ ತಂದಿಡಲಾಗಿದೆ. ಮುಂದಿನ ದಿನಗಳಲ್ಲಿ ಅದೇ ಜಾಗದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.