ಚಿತ್ರದುರ್ಗ :ಅವಾಚ್ಯ ಪದವನ್ನು ಬಳಸಿದ ಕಾರಣಕ್ಕೆ ಸ್ನೇಹಿತನನ್ನು ಇಟ್ಟಿಗೆಯಿಂದ ಹೊಡೆದು ಸಾಯಿಸಿರುವ ಘಟನೆ ಚಳ್ಳಕೆರೆ ನಗರದ ಕುರುಬರ ಭವನದಲ್ಲಿ ನಡೆದಿದೆ.
ಪಿ ಓಬಳಪುರ ಗ್ರಾಮದ ಅಂಜಿನಿ (27) ಕೊಲೆಗೀಡಾದ ವ್ಯಕ್ತಿ. ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೃತ ಅಂಜಿನಿ, ಚಳ್ಳಕೆರೆ ನಗರದಲ್ಲಿ ವಾಸವಾಗಿದ್ದ. ಆತನಿಗೆ ವೃತ್ತಿಯಲ್ಲಿ ಕಳ್ಳರಾದ ಮಂಜುನಾಥ್ ಅಲಿಯಾಸ್ ಕಳ್ಳಮಂಜ (28), ಗಿರೀಶ್ ಅಲಿಯಾಸ್ ಏಡ್ಸ್ ಗಿರಿ (31) ಜೊತೆ ಸ್ನೇಹ ಬೆಳೆದಿತ್ತು. ಜುಲೈ7ರಂದು ಮೂವರು ಸೇರಿ ಕಾಮಗಾರಿ ಸ್ಥಗಿತಗೊಂಡಿದ್ದ ಕುರುಬರ ಭವನದಲ್ಲಿ ಮಟಮಟ ಮಧ್ಯಾಹ್ನವೇ ಮದ್ಯ ಸೇವನೆ ಮಾಡಿದ್ದಾರೆ.
ನಂತರ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದಿದೆ. ಅಂಜಿನಿ, ಸ್ನೇಹಿತ ಮಂಜನಿಗೆ ಅವಾಚ್ಯ ಪದ ಬಳಸಿದ್ದಾನೆ. ಪರಿಣಾಮ ಕಳ್ಳ ಮಂಜ ಮತ್ತು ಗಿರಿ ಅಲ್ಲೇ ಇದ್ದ ಇಟ್ಟಿಗೆ ಹಾಗೂ ದೊಣ್ಣೆಯಿಂದ ಹೊಡೆದು ಕೊಂದು ಹಾಕಿದ್ದಾರೆ ಎನ್ನಲಾಗಿದೆ.