ಚಿತ್ರದುರ್ಗ: ಇನ್ನೋವಾ ಕಾರಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 8 ಕೋಟಿ ರೂಪಾಯಿ ನಗದನ್ನು ಹೊಳಲ್ಕೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗದಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ಕಾರನ್ನು ಮಲ್ಲಾಡಿಹಳ್ಳಿ ಸಮೀಪ ಪರಿಶೀಲಿಸಿದಾಗ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.
ಕಾರು ಚಾಲಕ ಸಚಿನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದು ಚಿತ್ರದುರ್ಗದ ಅಡಿಕೆ ವರ್ತಕರೊಬ್ಬರ ಹಣವಾಗಿದ್ದು, ಶಿವಮೊಗ್ಗದ ಇನ್ನೋರ್ವ ಅಡಿಕೆ ವರ್ತಕರಿಗೆ ನೀಡಲು ಹೊರಟಿದ್ದಾಗಿ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾರೆ. ಹಣದ ಬಗ್ಗೆ ಸೂಕ್ತ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.