ಚಿತ್ರದುರ್ಗ: ಬೆಳಗಿನ ಜಾವ 4 ಗಂಟೆಗೆ ಕ್ರೂಸರ್-ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್‌ನ ಚಾಲಕ ಸೇರಿ ಸ್ಥಳದಲ್ಲೇ 5 ಮಂದಿ ಸಾವನ್ನಪ್ಪಿ, 10ಕ್ಕೂ ಹೆಚ್ಚು ಜನ ಗಾಯಗೊಂಡಿರೋ ಘಟನೆ ಮೊಳಕಾಲ್ಮೂರಿನ ಬಿಜಿ ಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಆಸ್ಪತ್ರೆಗೆ ದಾಖಲಾದ 10ಕ್ಕೂ ಹೆಚ್ಚು ಮಂದಿ ಗಾಯಾಳುಗಳು.. ಮೃತರನ್ನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ವಿವಿಧ ಗ್ರಾಮಗಳ ನಿವಾಸಿಗಳಾದತಿಮ್ಮಣ್ಣ (40), ರತ್ನಮ್ನ (38), ಮಹೇಶ್ (19) ಹಾಗೂ ದುರ್ಗಪ್ಪ (16) ಎಂದು ಗುರುತಿಸಲಾಗಿದೆ. ಆದರೆ, ಇನ್ನೊಬ್ಬ ಮೃತ ವ್ಯಕ್ತಿಯ ಹೆಸರು ತಿಳಿದಿಲ್ಲ. ಹೆಂಡತಿ ಮಕ್ಕಳೊಂದಿಗೆ ಉದ್ಯೋಗ ಅರಸಿ ಕ್ರೂಸರ್ನಲ್ಲಿ ಬೆಂಗಳೂರಿಗೆ ಹೊರಟಿದ್ದ 22 ಕಾರ್ಮಿಕರ ಮೇಲೆ ವಿಧಿಯ ಅಟ್ಟಹಾಸಗೈದಿದೆ.
ಅಪಘಾತಕ್ಕೀಡಾದ ಕ್ರೂಸರ್ ಲಿಂಗಸುಗೂರು ಮಾರ್ಗವಾಗಿ ಬೆಂಗಳೂರಿನ ಕಡೆಗೆ ಹೊರಟಿತ್ತು.ಮೊಳಕಾಲ್ಮೂರಿನ ಬಿ ಜಿ ಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹೋಗುತ್ತಿದ್ದಾಗ ಮುಂದೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕ್ರೂಸರ್ಗೆ ಡಿಕ್ಕಿ ಹೊಡೆದಿದೆ.
ತಂದೆ ತಾಯಿ ಕಳೆದುಕೊಂಡ ಮಕ್ಕಳು :ತಂದೆ-ತಾಯಿ ಜೊತೆಗೆ ಹೊರಟಿದ್ದ ಮೂವರು ಪುಟ್ಟ ಕಂದಮ್ಮಗಳು ಅಪಘಾತದಲ್ಲಿ ಗಾಯಗೊಂಡಿವೆ. ಈ ಮೂವರು ತಿಮ್ಮಣ್ಣ ಹಾಗೂ ರತ್ನಮ್ಮ ದಂಪತಿಯ ಮಕ್ಕಳು ಎಂದು ತಿಳಿದು ಬಂದಿದೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಪೊಲೀಸರು ಹಾಗೂ ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೊಂದೆಡೆ 8 ತಿಂಗಳ ಕಂದಮ್ಮ ಸಹ ತಾಯಿ ಕಳೆದುಕೊಂಡು ಆಸ್ಪತ್ರೆ ಪಾಲಾಗಿದೆ.
ಮೂವರಿಗೆಗಂಭೀರ ಗಾಯ :ಅಪಘಾತವಾಗುತ್ತಿದ್ದಂತೆ ತೀವ್ರ ಗಾಯಗೊಂಡ ಹತ್ತಕ್ಕೂ ಅಧಿಕ ಜನರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಚಿತ್ರದುರ್ಗದ ಬಸವೇಶ್ವರ ಹಾಗೂ ದಾವಣಗೆರೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಸ್ಪಿ ರಾಧಿಕಾ ಹಾಗೂ ಪೊಲೀಸರ ತಂಡ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ : ಸ್ಥಳದಲ್ಲೇ ಐವರು ಸಾವು, 7 ಮಂದಿಗೆ ಗಾಯ