ಚಿಕ್ಕಮಗಳೂರು: ಆಹಾರ ಅರಸಿ ನಾಡಿಗೆ ಬಂದ ದೈತ್ಯ ಸಲಗವೊಂದು ಕಾಫಿ ತೋಟದ ಸುತ್ತು ಹಾಕಲಾಗಿದ್ದ ವಿದ್ಯತ್ ತಂತಿ ಬೇಲಿಗೆ ಬಲಿಯಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ಹಳೆ ಗಾಳಿಪೂಜೆ ಎಂಬ ಗ್ರಾಮದಲ್ಲಿ ನಡೆದಿದೆ.
ಕಾಡು ಪ್ರಾಣಿಗಳು ಬರುತ್ತವೆ ಅನ್ನೋ ಕಾರಣಕ್ಕೆ ಕಾಫಿ ತೋಟದ ಸುತ್ತ ವಿದ್ಯುತ್ ತಂತಿ ಬೇಲಿಯನ್ನ ಆಳವಡಿಸಲಾಗಿತ್ತು. ಆಹಾರ ಹುಡುಕಿ ತೋಟದತ್ತ ಕಡೆ ಹೆಜ್ಜೆ ಹಾಕಿದ ಗಜರಾಜ ಹಸಿವು ನೀಗಿಸೋ ಮೊದಲೇ ಮಾನವನ ಷಡ್ಯಂತ್ರಕ್ಕೆ ಬಲಿಯಾಗಿದ್ದಾನೆ. ಗ್ರಾಮದ ಬಸವರಾಜು ಎಂಬುವವರು ಕಾಫಿ ತೋಟದ ಸುತ್ತ ಹಾಕಿದ್ದ ಹೈ ಪವರ್ ಬೇಲಿ, ಮೂಕ ಜೀವಿಯ ಉಸಿರನ್ನೇ ನಿಲ್ಲಿಸಿದೆ. ಬೆಳ್ಳಂಬೆಳಗ್ಗೆ ಸುದ್ದಿ ತಿಳಿದು ನೂರಾರು ಜನರು ಕಾಫಿತೋಟದತ್ತ ಹೆಜ್ಜೆ ಹಾಕಿ ಒಂಟಿ ಸಲಗ ಜೀವ ಬಿಟ್ಟಿರೋದನ್ನ ನೋಡಿ ಮರುಕ ಪಟ್ಟರು.
ಈ ಭಾಗದಲ್ಲಿ ಹೆಚ್ಚಾಗಿ ಕಾಫಿ ತೋಟಗಳಿದ್ದು, ರೈತರು ತಮ್ಮ ಬೆಳೆಗಳನ್ನ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿರೋದು ಸತ್ಯ. ಆದರೆ, ಅನುಮತಿ ಪ್ರಕಾರ ಸೋಲಾರ್ ಬೇಲಿಗಳನ್ನ ಅಳವಡಿಸಬೇಕಿದ್ದ ರೈತ ವಿದ್ಯುತ್ ಸಂಪರ್ಕ ತೆಗೆದುಕೊಂಡು ವಿದ್ಯುತ್ ಬೇಲಿಗಳನ್ನ ಹಾಕಿ ಮೂಕ ಪ್ರಾಣಿಯ ಜೀವವನ್ನೆ ತೆಗೆದಿದ್ದಾರೆ.