ಚಿಕ್ಕಮಗಳೂರು : ಕಾರು-ಬೈಕ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ನಡೆಯಿತು. ಕಡೂರು ತಾಲೂಕಿನ ಹೇಮಗಿರಿ ಗೇಟ್ ಬಳಿ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಬೈಕ್ ಸಿಲುಕಿಕೊಂಡಿದ್ದು, ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಅರಸೀಕೆರೆ ತಾಲೂಕಿನ ಮಾವುತನಹಳ್ಳಿ ಗ್ರಾಮದ ಕಲ್ಲಮ್ಮ (60) ಮೃತರೆಂದು ತಿಳಿದುಬಂದಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚೌಡಯ್ಯ ಎಂಬವರಿಗೆ ಸೇರಿದ ಕಾರು ಇದಾಗಿದೆ. ಚೌಡಯ್ಯ ಬಾಣಾವರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದೇ ರೀತಿಯ ಪ್ರಕರಣ ಚಿಕ್ಕಮಗಳೂರು ತಾಲೂಕಿನಲ್ಲೂ ನಡೆದಿದೆ. ಲಾರಿ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮಂಜುನಾಥ್ (45) ಮೃತ ದುರ್ದೈವಿ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರಿನ ಕಣಿವೆಯ ಲಕ್ಯ ಕ್ರಾಸ್ ಬಳಿ ಘಟನೆ ನಡೆದಿದೆ. ಕೆಲಸ ಮುಗಿಸಿ ಆಟೋದಲ್ಲಿ ಹೋಗುತ್ತಿದ್ದ ಕಾರ್ಮಿಕರು ಗಾಯಗೊಂಡಿದ್ದಾರೆ.