ಚಿಕ್ಕಮಗಳೂರು:ಅದು ಬರೋಬ್ಬರಿ 20 ಕೋಟಿ ವೆಚ್ಚದ ಸರ್ಕಾರಿ ವಸತಿ ಶಾಲೆ. ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಶಾಲೆಗೆ ಹೋಗಿ ಬರಲು ಸರಿಯಾದ ರಸ್ತೆಯೇ ಇಲ್ಲದಂತಾಗಿದೆ. 20 ಕೋಟಿಯ ಸರ್ಕಾರಿ ವಸತಿ ಶಾಲೆಗೆ 10 ಅಡಿ ರಸ್ತೆ ಇಲ್ಲ. ಖಾಸಗಿ ಜಮೀನು ಮಾಲೀಕ ರಸ್ತೆ ಬಿಡ್ತಿಲ್ಲ. ಸರ್ಕಾರಿ ಜಾಗದಲ್ಲಿ ಸರ್ಕಾರ ರಸ್ತೆ ಮಾಡ್ತಿಲ್ಲ. ಮಕ್ಕಳು, ಶಿಕ್ಷಕರು, ಪೋಷಕರು ಮಾತ್ರ ಕೂಗಳತೆ ದೂರದ ಶಾಲೆಗೆ ಹೋಗಲು ಸುತ್ತಿ ಬಳಸಿ ಬೇರೊಂದು ಮಾರ್ಗದಿಂದ ಹೋಗಬೇಕಾಗುತ್ತಿದೆ ಎಂಬ ಗೋಳು ಪೋಷಕರು ಮತ್ತು ಶಿಕ್ಷಕರದ್ದಾಗಿದೆ.
ಹೌದು, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದೀಪುರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಾರಿ ವಸತಿ ಶಾಲೆಗೆ ಸರಿಯಾದ ರಸ್ತೆ ಮಾರ್ಗವಿಲ್ಲದೇ ಕೂಗಳತೆ ದೂರದ ಶಾಲೆಗೆ ಸುಮಾರು 6 ಕಿ.ಮಿ ಸುತ್ತಿ ಬಳಸಿ ಬರಬೇಕಾಗಿದೆ. ಕಾರಣ ಶಾಲೆ ಪಕ್ಕದ ಖಾಸಗಿ ಜಮೀನು ಮಾಲೀಕ ಶಾಲೆ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿದ್ದಾರೆ. ಹಾಗಾಗಿ 20 ಕೋಟಿ ವೆಚ್ಚದ ಸರ್ಕಾರಿ ಶಾಲೆಗೆ ರಸ್ತೆಯೇ ಇಲ್ಲ.
ಅಧಿಕಾರಿಗಳ ಎಡವಟ್ಟಿನಿಂದ ವಸತಿ ಶಾಲೆ ನಿರ್ಮಾಣ ಮಾಡಿದ ಪರಿಣಾಮ ಇಂದು ಶಿಕ್ಷಕರು ಹಾಗೂ ಮಕ್ಕಳು ರಸ್ತೆ ಇಲ್ಲದೇ ಪರದಾಡುವಂತಾಗಿದೆ. ಆರು ವರ್ಷಗಳ ಹಿಂದೆ ಅಂದಿನ ಶಾಸಕ ಶ್ರೀನಿವಾಸ್ ಎನ್ನುವವರು, ಈ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಿಸಿದ್ದರು. ಬಳಿಕ ಶಾಲೆ ನಿರ್ಮಾಣ ಆಯ್ತು. ಆದರೆ, ಶಾಲೆಗೆ ಹೋಗಲು ಸರಿಯಾದ ರಸ್ತೆ ಮಾರ್ಗವೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರ ಹಾಕುತ್ತಿದ್ದಾರೆ.