ಚಿಕ್ಕಮಗಳೂರು :ಜಿಲ್ಲೆಯಲ್ಲಿ ಸುರಿದ ಮಹಾ ಮಳೆಯಿಂದಾಗಿ ಹಲವಾರು ಅನಾಹುತಗಳೇ ಸೃಷ್ಟಿಯಾಗಿವೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮನೆಗಳು, ಕಾಫೀ ತೋಟಗಳು, ರಸ್ತೆಗಳು ಕುಸಿದು ಹೋಗಿದಲ್ಲದೇ ಇದೀಗ ಸೇತುವೆಗಳೇ ಕೊಚ್ಚಿ ಹೋಗಿದ್ದು, ಆ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜ್ಞೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿದ್ದಾರೆ.
ಮಲೆನಾಡಿನಲ್ಲಿ ಮಹಾಮಳೆಗೆ ಸೇತುವೆ ಕುಸಿತ.. ಶೋಭಾ ಕರಂದ್ಲಾಜ್ಞೆ ಭೇಟಿ.. ಸುರಿದ ಧಾರಾಕಾರ ಮಳೆ ಪರಿಣಾಮ ಹಲವಾರು ಭಾಗದಲ್ಲಿ ಸೇತುವೆಗಳೇ ಕೊಚ್ಚಿ ಹೋಗಿದ್ದು, ಜನರು ಓಡಾಡೋದಕ್ಕೂ ಹೆದರುವಂತಾಗಿದೆ. ಎನ್ಆರ್ಪುರ ತಾಲೂಕಿನ ಸೀತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಣಿಸರ ಗ್ರಾಮದಲ್ಲಿ ಈ ಹಿಂದೆ ಶಾಸಕರಾಗಿದ್ದ ಡಿ ಎನ್ ಜೀವರಾಜ್ 15 ರಿಂದ 20 ಲಕ್ಷ ರೂ.ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಿದ್ದರು. ಆದರೀಗ ಮಹಾ ಮಳೆಗೆ ಆ ಸೇತುವೆಯ ಕುರುಹು ಸಹ ಇಲ್ಲದಂತಾಗಿದೆ.
ದೋಣಿಸರ ಗ್ರಾಮದ ಸುತ್ತಮುತ್ತ ನೂರಾರು ಕುಟುಂಬಗಳಿದ್ದು, ಈ ಸೇತುವೆ ಮೇಲೆಯೇ ಪ್ರತಿನಿತ್ಯ ಸಂಚಾರ ಮಾಡಬೇಕಿತ್ತು. ಆದರೀಗ ಜನರು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಿದೆ. ಸದ್ಯ ಮರದ ದಿಮ್ಮಿಗಳಿಂದ ಕೃತಕ ಸೇತುವೆ ನಿರ್ಮಾಣ ಮಾಡಲಾಗಿದ್ದು, ಇದರ ಮೇಲೆಯೇ ಗ್ರಾಮಸ್ಥರು ಸಂಚಾರ ಮಾಡಬೇಕಾಗಿದೆ.
ಇನ್ನೂ ದೋಣಿಸರ ಗ್ರಾಮಕ್ಕೆ ಸಂಸದೆ ಶೋಭಾ ಕರಂದ್ಲಾಜ್ಞೆ ಭೇಟಿ ನೀಡಿದ್ದು ಕೊಚ್ಚಿ ಹೋಗಿರುವ ಸೇತುವೆ ಜಾಗದಲ್ಲಿ ನಿರ್ಮಾಣ ಮಾಡಿರುವ ಮರದ ದಿಮ್ಮಿಗಳ ಕೃತಕ ಸೇತುವೆ ಮೇಲೆ ಭಯದಿಂದಲೇ ನಡೆದು ಹೋಗಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಅನಾಹುತವಾಗಿದ್ದು ಹಳ್ಳದಲ್ಲಿ ಹರಿಯುತ್ತಿರುವ ನೀರಿನಲ್ಲಿ ಇನ್ನೂ ಇಳಿ ಮುಖವಾಗಿಲ್ಲ. ಹಾಗಾಗಿ ಕೂಡಲೇ ಸರ್ಕಾರದ ವತಿಯಿಂದ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.