ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಪ್ರಪಾತದಿಂದ ಟೆಕ್ಕಿಯ ಮೃತ ದೇಹ ಮೇಲಕ್ಕೆ ತಂದ ಪೊಲೀಸರು

ಮೂಡಿಗೆರೆ ತಾಲೂಕಿನ ರಾಣಿಝರಿ ಜಲಪಾತದ ಬಳಿಯ ಪ್ರಪಾತದಲ್ಲಿ ಸಿಕ್ಕ ಟೆಕ್ಕಿಯ ಮೃತದೇಹವನ್ನು ಪೊಲೀಸರು ಮೇಲಕ್ಕೆ ತಂದಿದ್ದಾರೆ.

ಟೆಕ್ಕಿ ಭರತ್
ಟೆಕ್ಕಿ ಭರತ್

By ETV Bharat Karnataka Team

Published : Dec 11, 2023, 10:24 PM IST

ಪ್ರಪಾತದಿಂದ ಸಿಕ್ಕ ಟೆಕ್ಕಿಯ ಮೃತ ದೇಹ ಮೇಲಕ್ಕೆ ತಂದ ಪೊಲೀಸರು

ಚಿಕ್ಕಮಗಳೂರು :ಜಿಲ್ಲೆಯ ಮೂಡಿಗೆರೆ ತಾಲೂಕಿನ ರಾಣಿಝರಿ ಜಲಪಾತದ ಬಳಿ ಸುಮಾರು 4 ಸಾವಿರ ಅಡಿ ಪ್ರಪಾತದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ, ಬೆಂಗಳೂರು ಮೂಲದ ಟೆಕ್ಕಿ ಭರತ್ ಎಂಬುವವರ ಮೃತದೇಹವನ್ನ ಪ್ರಪಾತದಿಂದ ಮೇಲಕ್ಕೆ ತರಲಾಗಿದೆ.

ಮೊನ್ನೆ ಸಂಜೆ ವೇಳೆಯೇ ಮೃತ ದೇಹ ಪತ್ತೆಯಾಗಿದ್ದರೂ ದಟ್ಟಕಾನನ, ಕಾಡುಪ್ರಾಣಿಗಳ ಕಾಟ, ಕತ್ತಲಲ್ಲಿ 4 ಸಾವಿರ ಅಡಿ ಪ್ರಪಾತದಿಂದ ಮೃತದೇಹ ಹೊರ ತರೋದು ಕಷ್ಟಸಾಧ್ಯ ಎಂದು ಪೊಲೀಸರು, ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳೀಯರು ಕಾರ್ಯಾಚರಣೆ ನಿಲ್ಲಿಸಿದ್ದರು.

ಇಂದು ರಾಣಿಝರಿ ಜಲಪಾತದ ಕಡೆಯಿಂದ ಪ್ರಪಾತಕ್ಕೆ ಇಳಿದ 25 ಜನರ ತಂಡ ಹರಸಾಹಸ ಪಟ್ಟು ಮೃತ ದೇಹವನ್ನ ಮೇಲಕ್ಕೆ ತಂದಿದ್ದಾರೆ. 4 ಸಾವಿರ ಅಡಿಯ ಪ್ರಪಾತದಿಂದ ಮೃತ ದೇಹವನ್ನ ತರುವುದು ಅಷ್ಟು ಸುಲಭವಲ್ಲ. ಆದರೆ, 25 ಜನರ ತಂಡ ಸುಮಾರು 5 ಕಿ.ಮೀ ಮೃತ ದೇಹವನ್ನ ಹೊತ್ತು ತಂದು ತೀರಾ ಕಡಿದಾದ ಪ್ರದೇಶದಲ್ಲಿ ಮರದಿಂದ ಮರಕ್ಕೆ ಹಗ್ಗ ಕಟ್ಟಿಕೊಂಡು ಮೃತದೇಹ ಹೊತ್ತುಕೊಂಡು ಹಗ್ಗದ ಮೂಲಕ ಬೆಟ್ಟ ಹತ್ತಿದ್ದಾರೆ.

ಭರತ್ ಮೃತದೇಹ ಸಂಪೂರ್ಣ ಛಿದ್ರ :ರಾಣಿಝರಿ ವ್ಯೂ ಪಾಯಿಂಟ್‍ನಿಂದ ಮೃತ ದೇಹವಿದ್ದ 4 ಸಾವಿರ ಅಡಿ ಪ್ರಪಾತಕ್ಕೆ ಸುಮಾರು 14 ಕಿ. ಮೀ ಆಗಲಿದೆ. ಸ್ಥಳೀಯರು, ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಮೃತ ದೇಹವನ್ನ ಮೇಲಕ್ಕೆ ತರುವಲ್ಲಿ ಯಶಸ್ವಿ ಆಗಿದ್ದಾರೆ. 4 ಸಾವಿರ ಅಡಿ ಪ್ರಪಾತದಿಂದ ಬಿದ್ದ ರಭಸಕ್ಕೆ ಭರತ್ ಮೃತದೇಹ ಸಂಪೂರ್ಣ ಛಿದ್ರ ಛಿದ್ರವಾಗಿತ್ತು. ಸಾಲದ್ದಕ್ಕೆ ದಟ್ಟಕಾನನ ತಂಪಾದ ವಾತಾವರಣಕ್ಕೆ ದೇಹ ಕೊಳೆತು ಹೋಗಿತ್ತು ಎಂಬುದಾಗಿ ತಿಳಿದು ಬಂದಿದೆ.

ಕೆಲಸ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆ ಶಂಕೆ:ಈ ಕುರಿತಂತೆಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ 6 ರಂದು ಚಿಕ್ಕಮಗಳೂರು ಜಿಲ್ಲೆಯ ರಾಣಿ ಝರಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕ ತನ್ನ ಮೊಬೈಲ್, ಬೈಕ್, ಐಡಿ ಕಾರ್ಡ್, ಬಟ್ಟೆಯನ್ನ ಗುಡ್ಡದ ತುದಿಯಲ್ಲಿ ಬಿಟ್ಟು ನಾಪತ್ತೆಯಾಗಿದ್ದ. ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮೂರು ದಿನಗಳ ಬಳಿಕ ಅವರ ಕುಟುಂಬಸ್ಥರು ಪ್ರಕರಣ ದಾಖಲಿಸಿ ಹುಡುಕಲು ಮುಂದಾಗಿದ್ದರು. ಬೆಂಗಳೂರಿನಲ್ಲಿ ಎಂಎನ್​ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೆಲಸ ಕಳೆದು ಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಪೊಲೀಸ್​ ತನಿಖೆ ಬಳಿಕ ಸಾವಿನ ಕಾರಣ ತಿಳಿದು ಬರಬೇಕಿದೆ.

ಇದನ್ನೂ ಓದಿ :ಚಿಕ್ಕಮಗಳೂರು: ಟ್ರೆಕ್ಕಿಂಗ್​ಗೆ ಬಂದಿದ್ದ ಯುವಕ ಶವವಾಗಿ ಪತ್ತೆ

ABOUT THE AUTHOR

...view details