ಚಿಕ್ಕಮಗಳೂರು:ರಸ್ತೆಯಲ್ಲಿ ಅಪಘಾತವಾಗಿ ಆರೋಗ್ಯಾಧಿಕಾರಿ ನರಳಾಡುತ್ತಿದ್ದರು ಸಹಾಯಕ್ಕೆ ಹೋಗದ ತರೀಕೆರೆ ಶಾಸಕ ಡಿ.ಎಸ್. ಸುರೇಶ್ ತಮ್ಮ ಮೇಲಿನ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ತರೀಕೆರೆ ಶಾಸಕ ಸುರೇಶ್ ಪ್ರತಿಕ್ರಿಯೆ ಓದಿ: ಕೋವಿಡ್ ವಾರಿಯರ್ ರಸ್ತೆಯಲ್ಲಿ ಬಿದ್ದು ಒದ್ದಾಡಿದರೂ ತಿರುಗಿ ನೋಡದ ಆರೋಪ: ಹೀಗಿದೆ ತರೀಕೆರೆ ಶಾಸಕರ ಸ್ಪಷ್ಟನೆ!
ನನಗೆ ಕೊರೊನಾ ಪಾಸಿಟಿವ್ ಬಂದು ಗುಣಮುಖವಾಗಿ ಬಂದ ನಂತರ ಜನರ ಸೇವೆಯಲ್ಲಿ ನಿರತನಾಗಿದ್ದೇನೆ. ನಿನ್ನೆ ಮಧ್ಯಾಹ್ನ ತರೀಕೆರೆಯ ಲಕ್ಕವಳ್ಳಿ ಕ್ರಾಸ್ನಲ್ಲಿ ಒಂದು ಅಪಘಾತ ಸಂಭವಿಸಿತ್ತು. ನನಗೆ ಕಣ್ಣಿನ ಬೇನೆ ಇದ್ದಿದ್ದರಿಂದ ಕಣ್ಣಿಗೆ ಡ್ರಾಪ್ ಹಾಕಿಸಿಕೊಂಡು ಕಾರಿನಲ್ಲಿ ನಿದ್ರೆಗೆ ಜಾರಿದ್ದೆ. ಆ ವೇಳೆ ನನ್ನ ಕಾರು ಚಾಲಕ ಹಾಗೂ ಗನ್ ಮ್ಯಾನ್ ಕಾರನ್ನು ಸೈಡಿಗೆ ಹಾಕಿ ಇಳಿದು ಹೋಗಿ ನೋಡಿದ್ದಾರೆ.
ನಾನು ನಿದ್ರೆ ಮಾಡುತ್ತಿದ್ದೆ. ನಾನು ಅದನ್ನು ಗಮನಿಸಿಲ್ಲ, ಕೂಡಲೇ ಆ್ಯಂಬುಲೆನ್ಸ್ ಗೆ ಕರೆ ಮಾಡಿ ವಿಚಾರ ತಿಳಿಸಲಾಗಿತ್ತು. ಆ್ಯಂಬುಲೆನ್ಸ್ ಕೂಡಲೇ ಸ್ಥಳಕ್ಕೆ ಬಂದಿದ್ದು, ಅವರನ್ನು ಕಳುಹಿಸಲಾಗಿದೆ. ಆದರೆ ಯಾರೋ ಕಿಡಿಗೇಡಿಗಳು ಇದನ್ನು ವಿಡಿಯೋ ಮಾಡಿ ಕಾರಿನಲ್ಲಿ ಕುಳಿತಿದ್ದಾರೆ. ಹೊರಗೆ ಬಂದಿಲ್ಲ ಎಂದು ಅಪ ಪ್ರಚಾರ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮಾಡುವಂತೆ ನಾನು ಅವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.