ಚಿಕ್ಕಮಗಳೂರು:ದಲಿತ ಕಾರ್ಮಿಕರನ್ನು ಕೂಡಿ ಹಾಕಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರತಿಕ್ರಿಯೆ ನೀಡಿದ್ದು, ಕಳೆದ 10 ರಂದು ಅರ್ಪಿತಾ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಹುಣಸೇಹಳ್ಳಿಯ ಜಗದೀಶ್ ಗೌಡ ಎಂಬುವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ನಾವು ಜಗದೀಶ್ ಗೌಡ ಅವರಿಂದ ಕಾಫಿ ತೋಟದಲ್ಲಿ ಕೆಲಸ ಮಾಡಲು 9 ಲಕ್ಷ ಅಡ್ವಾನ್ಸ್ ತೆಗೆದುಕೊಂಡಿದ್ದೆವು. ಹಣ ವಾಪಸ್ ನೀಡುವ ವಿಚಾರದಲ್ಲಿ ನಮ್ಮ ಮೇಲೆ ಜಗದೀಶ್ ಗೌಡ ಹಾಗೂ ಅವರ ಮಗ ಹಲ್ಲೆ ಮಾಡಿದ್ದಾರೆ. ನಮ್ಮನ್ನು ಕೊಠಡಿಯಲ್ಲಿ ಕೂಡಿ ಹಾಕಿ ನಮ್ಮ ಮೊಬೈಲ್ಗಳನ್ನು ಕಿತ್ತು ಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ ಎಂದು ಉಮಾ ಪ್ರಶಾಂತ್ ಹೇಳಿದ್ದಾರೆ.
ಈ ಕುರಿತು ಎಸ್ಸಿ, ಎಸ್ಟಿ ದೌರ್ಜನ್ಯದ ಕಾಯ್ದೆ 504, 323, 342 ಅಡಿ ಜಗದೀಶ್ ಗೌಡ ಹಾಗೂ ಆತನ ಮಗ ತಿಲಕ್ ಮೇಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿಲ್ಲ. ಹಲ್ಲೆ ಮಾಡಿದ ಸಮಯದಲ್ಲಿ ಆಕೆಗೆ ಗರ್ಭಪಾತವಾದ ಬಗ್ಗೆ ನಮ್ಮ ಬಳಿ ಅವರು ಏನು ಹೇಳಿಕೊಂಡಿಲ್ಲ.