ಚಿಕ್ಕಮಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ, ಚಂದನವನದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ನಿಧನರಾಗಿ ಇಂದಿಗೆ (ಜೂ. 15) ಒಂದು ವರ್ಷ. ಈ ಹಿನ್ನೆಲೆಯಲ್ಲಿ ರಂಗಗೀತೆಗಳ ಮೂಲಕ ಇಲ್ಲಿಯ ಸಂಚಾರಿ ಗೆಳೆಯರ ಬಳಗವು ಅವರನ್ನು ನೆನಪು ಮಾಡಿಕೊಂಡಿತು. ಇದಕ್ಕೂ ಮುನ್ನ ವಿಜಯ್ ಸ್ವಗ್ರಾಮ ಪಂಚನಹಳ್ಳಿಯಲ್ಲಿ ನಿರ್ಮಿಸಿರುವ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ, ಪುತ್ಥಳಿಯ ಸುತ್ತ ಗಿಡಗಳನ್ನು ನೆಡಲಾಯಿತು.
ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯತಿಥಿ; ರಂಗ ಗೀತೆಗಳ ಮೂಲಕ ನಮನ
ದಿ.ಸಂಚಾರಿ ವಿಜಯ್ ಅವರ ನೆಚ್ಚಿನ ರಂಗಸಂಸ್ಥೆ ಸಂಚಾರಿ ಬಳಗವು ಅವರ ಸಮಾಧಿ ಬಳಿ ಇಂದು ರಂಗಗೀತೆ ನಮನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಿಜಯ್ ಅವರ ಇಷ್ಟದ ಹಾಡುಗಳನ್ನು ಹೇಳುವ ಮೂಲಕ ನಮನ ಸಲ್ಲಿಸಲಾಯಿತು.
ಸಂಚಾರಿ ಥಿಯೇಟರ್ನಲ್ಲಿ ವಿಜಿ ಅಭಿನಯಿಸಿ, ನಿರ್ದೇಶಿಸಿದ್ದ ನಾಟಕಗಳ ರಂಗಗೀತೆಯನ್ನು ಇದೇ ಸಂದರ್ಭದಲ್ಲಿ ಹಾಡಿ ನೆನಪು ಮಾಡಿಕೊಳ್ಳಲಾಯಿತು. ಹಾಡು ಹಾಡುತ್ತಲೇ ಕಲಾವಿದರು ಸಹ ಕಲಾವಿದನ ನೆನೆದು ಕಂಬನಿ ಸುರಿಸಿದರು. ವಿಶೇಷ ಕಾರ್ಯಕ್ರಮದಲ್ಲಿ ಸಂಚಾರಿ ಥಿಯೇಟರ್ನ ಮಂಗಳಾ, ಗಜಾನನ, ನಾಯಕ್, ಸತ್ಯಶ್ರೀ, ದರ್ಶನ್, ಕಿರಣ್, ಜಗದೀಶ್, ಶಿವಕುಮಾರ್, ಅರವಿಂದ ಹುಬ್ಳೀಕರ್, ತಲೆ ದಂಡ ಸಿನಿಮಾ ನಾಯಕಿ ಚೈತ್ರಾ, ಸಂಚಾರಿ ವಿಜಯ್ ಸಹೋದರ ವಿರೂಪಾಕ್ಷ ಸೇರಿದಂತೆ ಕುಟುಂಬದವರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಕಳೆದ ವರ್ಷದ ಜೂನ್ 12ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಟ ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದರು. ತಲೆಗೆ ಬಲವಾದ ಪೆಟ್ಟು ಬಿದ್ದು ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಅಂತಿಮವಾಗಿ ಜೂನ್ 15ರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದರು.