ಬೆಂಗಳೂರು: ರೈತರಿಗೆ ಭೂಗಳ್ಳರೆಂಬ ಹಣೆಪಟ್ಟಿ ಬೇಡ. ರೈತರನ್ನು ಲ್ಯಾಂಡ್ ಗ್ರಾಬರ್ಸ್ ಆಕ್ಟ್ನಿಂದ ಹೊರಗಿಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮಾಜಿ ಸಚಿವ ಜೀವರಾಜ್ ಮನವಿ ಮಾಡಿದ್ದಾರೆ.
ಲ್ಯಾಂಡ್ ಗ್ರಾಬರ್ಸ್ ಆಕ್ಟ್ನಿಂದ ರೈತರನ್ನು ಹೊರಗಿಡಲು ಮಾಜಿ ಸಚಿವ ಜೀವರಾಜ್ ಮನವಿ ಮಾಜಿ ಸಚಿವ ಜೀವರಾಜ್ ನೇತೃತ್ವದ ಮಲೆನಾಡಿನ ರೈತರು ಮತ್ತು ವಕೀಲರ ನಿಯೋಗವು ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿತು. ಸಿಎಂ ಜೊತೆ ಲ್ಯಾಂಡ್ ಗ್ರಾಬರ್ಸ್ ಕಾಯ್ದೆ ಕುರಿತು, ಅದರಿಂದ ಆಗುತ್ತಿರುವ ಸಮಸ್ಯೆ ಕುರಿತು ಅವರ ಗಮನಕ್ಕೆ ತರಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೀವರಾಜ್, ಲ್ಯಾಂಡ್ ಗ್ರಾಬಿಂಗ್ ಕಾಯ್ದೆ 2011 ಮತ್ತು 2014 ರ ತಿದ್ದುಪಡಿ ಮಾಡಿದ್ದು ನಗರ ಪ್ರದೇಶದ ಕೆರೆಗಳು, ಪಟ್ಟಣದ ಜಾಗ, ರಾಜಕಾಲುವೆಗಳ ಒತ್ತುವರಿಯಡಿ ಕ್ರಮ ಕೈಗೊಳ್ಳುವ ಕೆಲಸ ಆಗಬೇಕಿತ್ತು ಆದರೆ ಆ ಕಾಯ್ದೆಯ ದುರ್ಬಳಕೆಯಾಗುತ್ತಿದೆ. ಸಣ್ಣ ರೈತರಿಗೆ ಸಮಸ್ಯೆ ಬರುತ್ತಿದೆ ಎಂದರು.
ಈ ಕಾನೂನು ನಗರದವರಿಗೆ ಅನ್ವಯ ಆಗುತ್ತಿಲ್ಲ ಹಾಗಾಗಿ ರೈತರನ್ನು ಗ್ರಾಬರ್ಸ್ ಹೆಸರಿಂದ ಹೊರಗೆ ಇಡಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇವೆ. ಕಾನೂನಿನಲ್ಲಿ ಏನೆಲ್ಲಾ ಅವಕಾಶವಿದೆ ಎಂದು ತಿಳಿಸಿದ್ದೇವೆ. ಸಿಎಂ ಪರಿಶೀಲನೆ ಮಾಡುವ ಭರವಸೆ ನೀಡಿದ್ದಾರೆ ಎಂದರು.