ಚಿಕ್ಕಮಗಳೂರು : ಅದು ಸರ್ಕಾರಿ ಆಂಬ್ಯುಲೆನ್ಸ್. ಅದರದ್ದೂ ಕೂಡ ಜೀವ ಉಳಿಸೋ ವೈದ್ಯರದ್ದಷ್ಟೆ ಪ್ರಮುಖ ಪಾತ್ರ. ಆದ್ರೆ, ಅದರ ಕೈ-ಕಾಲು-ಜೀವಾಳದಲ್ಲಿ ಜೀವವೇ ಇಲ್ಲ. ಜೀವ ಉಳಿಸೋಕೆಂದು ತುಂಬು ಗರ್ಭೀಣಿಯನ್ನ ಹೊತ್ತೊಯ್ತಿದ್ದ ಆಂಬುಲೆನ್ಸ್ ನಡು ರಸ್ತೆಯಲ್ಲಿ ಕೆಟ್ಟು ನಿಂತು ಗರ್ಭೀಣಿ ಒಂದು ಗಂಟೆಗಳ ಕಾಲ ಜೀವನ್ಮರಣದ ನಡುವೆ ಹೋರಾಡಿದ್ದಾಳೆ. ಆಂಬ್ಯುಲೆನ್ಸ್ ಮೂರು ಬಾರಿ ಕೆಟ್ಟು ನಿಂತ ಪರಿಣಾಮ ಬೇರೊಂದು ಆಂಬ್ಯುಲೆನ್ಸ್ ತಂದು ಗರ್ಭಿಣಿಯನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಅದೃಷ್ಟವಶಾತ್ ತಾಯಿ - ಮಗು ಸೇಫಾಗಿದ್ದಾರೆ.
ಎರಡ್ಮೂರು ಬಾರಿ ಕೆಟ್ಟು ನಿಂತ ಆಂಬ್ಯುಲೆನ್ಸ್: ಕಳಸ ತಾಲೂಕಿನ ಹಳುವಳ್ಳಿ ಗ್ರಾಮದ ಶರಣ್ಯ ಎಂಬ ತುಂಬು ಗರ್ಭಿಣಿಯನ್ನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಆಂಬ್ಯುಲೆನ್ಸ್ ಕೆಟ್ಟು ನಿಂತಿದೆ. ದುರಸ್ತಿ ಮಾಡಿಕೊಂಡು ಹೊರಟರೆ ಸ್ವಲ್ಪ ದೂರದಲ್ಲಿ ತಾಂತ್ರಿಕ ದೋಷದಿಂದ ಮತ್ತೆ ನಿಂತಿತ್ತು. ಈ ಮಧ್ಯೆ ರಸ್ತೆಯಲ್ಲಿನ ಗುಂಡಿಗೆ ಇಳಿದ ಆಂಬ್ಯುಲೆನ್ಸ್, ಪಂಚರ್ ಕೂಡ ಆಗಿದೆ. ಹೀಗೆ ಎರಡ್ಮೂರು ಬಾರಿ ಕೆಟ್ಟು ನಿಂತ ಆಂಬ್ಯುಲೆನ್ಸ್ ದುರಸ್ತಿಯಾಗುವಷ್ಟರಲ್ಲಿ ಸುಮಾರು 2 ಗಂಟೆಗಳೇ ಕಳೆದಿದೆ.
ಸರ್ಕಾರದ ವಿರುದ್ಧ ಜನಾಕ್ರೋಶ: ಇದರಿಂದ ತೀವ್ರ ಅಸ್ವಸ್ಥರಾದ ಶರಣ್ಯಳನ್ನ ಕಂಡು ಸ್ಥಳೀಯರು ಬಾಳೆಹೊನ್ನೂರಿಗೆ ಫೋನ್ ಮಾಡಿ ಬೇರೊಂದು ಆಂಬ್ಯುಲೆನ್ಸ್ ಕರೆಸಿ ಮಹಿಳೆಯನ್ನ ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಪ್ಪ ಆಸ್ಪತ್ರೆಗೆ ದಾಖಲಾದ ಶರಣ್ಯ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಜೀವ ಉಳಿಸುವ ಆಂಬ್ಯುಲೆನ್ಸ್ ಗಳೇ ಹೀಗೆ ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿರುವುದರಿಂದ ಜನ ಸಾಮಾನ್ಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.