ಕಾಂಗ್ರೆಸ್ ವಿರುದ್ಧ ಬಿಜೆಪಿಯ ಪೋಸ್ಟರ್ ಅಭಿಯಾನ ಚಿಕ್ಕಮಗಳೂರು:ಕಾಫಿನಾಡು ಚಿಕ್ಕಮಗಳೂರಿನಲ್ಲಿ ಶನಿವಾರ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ. ನಗರದ ತಾಲೂಕು ಕಚೇರಿ, ಮೆಸ್ಕಾಂ ಕಚೇರಿ, ತಾಲೂಕು ಪಂಚಾಯ್ತಿ ಹಾಗೂ ಪ್ರವಾಸಿ ಮಂದಿರದಲ್ಲಿ ಸರ್ಕಾರ ಹಾಗೂ ಸಿಎಂ ವಿರುದ್ಧ ಬಿಜೆಪಿ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ವಿವಿಧೆಡೆ ಪೋಸ್ಟರ್ ಹಾಕಿ ಕಾರ್ಯಕರ್ತರು ಟೀಕೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ಯಾಡೋ ಸಿಎಂ ಎಂಬ ವ್ಯಂಗ್ಯ ಚಿತ್ರದ ಮೂಲಕ ಸರ್ಕಾರದ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ ಜೆ ಜಾರ್ಜ್ ವಿರುದ್ಧವೂ ಪೋಸ್ಟರ್ ಹಾಕಲಾಗಿದೆ.
ರಾಜ್ಯವನ್ನು ಕತ್ತಲೆಗೆ ದೂಡಿ ಇಂಧನ ಸಚಿವರು ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರು ಟೀಕೆ ಮಾಡಿದ್ದಾರೆ.
ಸೋನಿಯಾ ಗಾಂಧಿ, ಸಿ.ಎಂ. ಸಿದ್ದರಾಮಯ್ಯ, ಡಿ ಕೆ. ಶಿವಕುಮಾರ್, ಯತೀಂದ್ರ ಸಿದ್ದರಾಮಯ್ಯ, ಕೆ.ಜೆ. ಜಾರ್ಜ್ ಅವರ ವಿರುದ್ಧ ಪೋಸ್ಟರ್ ಹಾಕಲಾಗಿದೆ. ಸರ್ಕಾರ ಒಂದೆಡೆ ಉಚಿತ ಎಂದು ಹೇಳಿಕೊಂಡು ಮತ್ತೊಂದೆಡೆ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಫ್ರೀ ಭಾಗ್ಯವಲ್ಲ, ಹಗಲು ದರೋಡೆ ಎಂದು ನಗರದಾದ್ಯಂತ ಅಲ್ಲಲ್ಲೇ ಪೋಸ್ಟರ್ ಅಂಟಿಸಲಾಗಿದೆ. ವೈಎಸ್ಟಿ ಸಂಗ್ರಹ ಸಮಿತಿಯ ಸುತ್ತೋಲೆ, ಹಲೋ ಅಪ್ಪಾ, ಆ್ಯಪ್ ಡೌನ್‌ಲೋಡ್ ಮಾಡಿ ಪೇಮೆಂಟ್ ಮಾಡಿ. ಇದು ರಾಜ್ಯ ಸರ್ಕಾರದ ಹಗಲು ದರೋಡೆ ಎನ್ನುವ ಪೋಸ್ಟರ್ಗಳನ್ನು ಅಂಟಿಸಿದ್ದಾರೆ.
ಇದನ್ನೂ ಓದಿ:ಅಧಿಕಾರ ಕೈಗೆ ಸಿಗದೆ ಹೆಚ್ಡಿಕೆ ಮಾನಸಿಕ ಸ್ವಾಸ್ತ್ಯ ಕಲಕಿದ ಹಾಗೆ ಕಾಣುತ್ತಿದೆ: ಸಿಎಂ ಸಿದ್ದರಾಮಯ್ಯ