ಚಿಕ್ಕಮಗಳೂರು:ರಾಷ್ಟ್ರೀಯ ಹೆದ್ದಾರಿಗಾಗಿ ರೈತರ ಫಲವತ್ತಾದ ಭೂಮಿಯಲ್ಲಿ ಮಣ್ಣನ್ನು ಅಗೆದು, ನಿಮ್ಮ ಜಮೀನಿಗೆ ಕೆರೆ ಅಂಗಳದ ಕಪ್ಪು ಅಥವಾ ಕೆಂಪು ಗೋಡು ಮಣ್ಣನ್ನು ತುಂಬಿಸುತ್ತೇವೆ ಎಂದು ರೈತರಿಗೆ ಅಂಗೈಯಲ್ಲಿ ಆಕಾಶ ತೋರಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹೊಲದ ಫಲವತ್ತಾದ ಮಣ್ಣನ್ನು ಹೆದ್ದಾರಿಗೆ ಹಾಕಿದ್ರು: ರೈತರಿಗೆ ಅಂಗೈಯಲ್ಲಿ ಆಕಾಶ ತೋರಿಸಿದ್ರು! - National Highway 173
ರೈತರ ಹೊಲದಲ್ಲಿದ್ದ ಫಲವತ್ತಾದ ಮಣ್ಣನ್ನು ತುಂಬಿ ರಾಷ್ಟ್ರೀಯ ಹೆದ್ದಾರಿಗೆ ಹಾಕಿ ಈಗ ರೈತರಿಗೆ ಕೆರೆ ಅಂಗಳದ ಕಪ್ಪು, ಕೆಂಪು ಮಣ್ಣನ್ನು ಜಮೀನಿಗೆ ನೀಡದೆ ಹೆದ್ದಾರಿ ಪ್ರಾಧಿಕಾರ ನಿರ್ಲರ್ಕ್ಷಿಸಿದೆ ಎಂಬ ಆರೋಪ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇಳಿ ಬಂದಿದೆ.
ಕಡೂರಿನಿಂದ ಮಂಗಳೂರು ಮುಟ್ಟಲಿರುವ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಹೊಸ ಹಾಗೂ ಸ್ಟ್ರೈಟ್ ರೋಡ್ ಚೆನ್ನಾಗಿಯೇ ಇದೆ. ರಸ್ತೆಯಲ್ಲಿ ಗುಂಡಿ ಬೀಳಬಾರದು ಅಂತ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಹಿರೇಗೌಜ ಸುತ್ತಮುತ್ತಲಿನ ಜಮೀನಿನಲ್ಲಿ ಗ್ರಾವೆಲ್ ಮಣ್ಣು ಅಗೆದು ಈ ಹೆದ್ದಾರಿ ಕಳಗೆ ಹಾಕಿದ್ದಾರೆ. ರೈತರ ಜಮೀನಲ್ಲಿ ಮಣ್ಣು ತುಂಬುವ ವೇಳೆ ನಿಮ್ಮ ಜಮೀನಿಗೆ ಕೆರೆ ಅಂಗಳದ ಫಲವತ್ತಾದ ಕೆಂಪು ಅಥವಾ ಕಪ್ಪು ಮಣ್ಣನ್ನ ಹಾಕಿ ಕೋಡ್ತೀವಿ ಎಂದಿದ್ದಾರೆ.
ಇದರಂತೆ ಸುಮಾರು 500 ಲೋಡ್‍ಗೂ ಅಧಿಕ ಮಣ್ಣನ್ನು ತೆಗೆದಿದ್ದಾರೆ. ರಸ್ತೆ ನಿರ್ಮಾಣವಾಗಿ ಎರಡ್ಮೂರು ತಿಂಗಳೇ ಕಳೆದರೂ ರೈತರ ಜಮೀನಿಗೆ ಮಣ್ಣು ಹಾಕಿಸಿಲ್ಲ. ಮಳೆಗಾಲ ಆರಂಭಕ್ಕೂ ಮುನ್ನ ಬೆಳೆ ಬೆಳೆಯೋ ರೈತರ ಕನಸಿಗೆ ಹೆದ್ದಾರಿ ಪ್ರಾಧಿಕಾರ ತಣ್ಣೀರೆರಚಿದೆ. ಈಗಾಗಲೇ ರೈತರು ಇಂಜಿನಿಯರ್ಗಳಿಗೆ ಬೆಳೆ ಬೆಳೆಯಬೇಕು ಜಮೀನಿಗೆ ಮಣ್ಣು ಹಾಕಿಸಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಯಾವುದೇ ರೀತಿಯ ಪ್ರಯೋಜನ ಆಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ರೈತರ ಜಮೀನಿಗೆ ಮಣ್ಣು ಹಾಕಿಸದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.