ಚಿಕ್ಕಮಗಳೂರು: ಒಂದು ತಿಂಗಳ ಅವಧಿಯಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ತೋಟದ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕ ಅರ್ಜುನ್ ಎಂಬುವರ ಮೇಲೆ ಆನೆ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೂಡಿಗೆರೆ ತಾಲೂಕಿನ ಊರಬಗೆ, ಗೌಡಹಳ್ಳಿ ಭಾಗದಲ್ಲಿ ಐದು ಕಾಡಾನೆಗಳು ಬೀಡುಬಿಟ್ಟಿವೆ. ಈ ಬಗ್ಗೆ ಸ್ಥಳೀಯರು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಅರಣ್ಯ ಇಲಾಖೆ ಮಾಡಿದ ಕೊಲೆ ಎಂದು ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳಿಯ ಮುಖ್ಯ ರಸ್ತೆ ಬಳಿಯೇ ಆನೆ ದಾಳಿ ಮಾಡಿರುವುದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಕಳೆದ ಆ.25 ರಂದು ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದ ಆನಂದ್ ದೇವಾಡಿಗ ಎಂಬುವರ ಮೇಲೆ ಆನೆ ದಾಳಿ ಮಾಡಿದ್ದು ಅವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಮೃತ ದೇಹವನ್ನ ಆನೆ ಕಾಡಿನಲ್ಲಿ ಸುಮಾರು ಒಂದು ಕಿ.ಮೀ. ಎಳೆದುಕೊಂಡು ಹೋಗಿದ್ದ ಪರಿಣಾಮ ದೇಹದ ಅಂಗಾಂಗಗಳು ಕಾಡಿನಲ್ಲಿ ಚದುರಿ ಹೋಗಿದ್ದವು.