ಚಿಕ್ಕಮಗಳೂರು:ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಟೋಲ್ ಗೇಟ್ ಬಳಿ, ಬಸ್ ನಿಲ್ಡಾಣ, ನಗರ ಪ್ರದೇಶ, ಇನ್ನಿತರ ಪ್ರದೇಶಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರು ಇದೀಗ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಮಾದರಿ ಜೀವನ ನಡೆಸುತ್ತಿದ್ದಾರೆ.
ಭಿಕ್ಷೆ ನಿಲ್ಲಿಸಿ ಕೃಷಿ ಕಾಯಕ... ನಿಜಕ್ಕೂ ಮಾದರಿ ಈ ಮಂಗಳಮುಖಿಯರು! - kannadanews
ಚಿಕ್ಕಮಗಳೂರಿನ ಮಂಗಳಮುಖಿಯರು ಕೃಷಿ ಹಾಗೂ ಹೈನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದು, ಇತರ ಮಂಗಳಮುಖಿಯರಿಗೆ ಮಾದರಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ವಾತಾವರಣ ಇಲ್ಲಿನ ಕೆಲವು ಮಂಗಳಮುಖಿಯರಿಗೆ ಕೃಷಿ ಮಾಡುವಂತೆ ಪ್ರೇರೇಪಣೆ ನೀಡಿದೆ. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಇವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಲಿ ತಿಮ್ಮಾಪುರ ಗ್ರಾಮದಲ್ಲಿ ಅಪ್ಪಟ ಕೃಷಿ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ರೈತರೇ ನೋಡಿ ಬೇರಗಾಗುವಂತೆ ಎಲ್ಲರೂ ಸಾಮೂಹಿಕವಾಗಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಗುತ್ತಿಗೆ ಪಡೆದ ನಾಲ್ಕೂವರೆ ಎಕರೆ ಪ್ರದೇಶದ ಭೂಮಿಯಲ್ಲಿ ಆರು ಜನ ಮಂಗಳಮುಖಿಯರು ಪ್ರತಿನಿತ್ಯ ದುಡಿದು ರೈತ ಕುಟುಂಬದಂತೆ ಬದುಕು ಸಾಗಿಸುತ್ತಿದ್ದಾರೆ. ಮೆಕ್ಕೆಜೋಳ, ಟೊಮ್ಯಾಟೋ, ಆಲೂಗೆಡ್ಡೆ, ಬದನೆ ಸೇರಿದಂತೆ ಮಿಶ್ರ ಬೆಳೆಗಳನ್ನು ಬೆಳೆಯುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕೃಷಿಯ ಬಗ್ಗೆ ಗೊತ್ತಿಲ್ಲದ ಈ ಆರು ಜನರು ಆರಂಭದಲ್ಲಿ ಉಳುಮೆ ಸೇರಿದಂತೆ ಯಾವುದೇ ಕೆಲಸ ಮಾಡಲು ಬಾರದೆ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದು, ಇದೇ ಹುಲಿತಿಮ್ಮಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ದುಡಿದು ಕೃಷಿಯ ಅನುಭವ ಪಡೆದು ಇಂದು ಸ್ವಂತವಾಗಿ ಕೃಷಿ ಮಾಡುವಂತಹ ಹಂತಕ್ಕೆ ತಲುಪಿದ್ದಾರೆ. ಆರು ಜನರು ಕೃಷಿ ಜೊತೆಗೆ ಕುರಿ, ಹಸುಗಳನ್ನು ಸಾಕುವುದರ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದು, ಈ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳುತ್ತಿದ್ದಾರೆ.