ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಊರ ಹೊರಗೆ ಕೆಂಚರಾಯನ ದೇವಸ್ಥಾನವಿದೆ. ಈ ಕೆಂಚರಾಯನಿಗೆ ಏಳು ಗುಡ್ಡಗಳನ್ನ ಆವರಿಸಿಕೊಂಡಿರುವ 2036 ಎಕರೆ ಪ್ರದೇಶದ ನೀರು ಒಂದು ಹೊತ್ತಿನ ಊಟಕ್ಕೂ ಸಾಲೋದಿಲ್ಲ, ಕೆಂಚರಾಯ ಮೂರೇ ಬೊಗಸೆಗೆ ನೀರನ್ನು ಖಾಲಿ ಮಾಡುತ್ತಾನೆ ಎಂಬ ನಂಬಿಕೆ ಈ ಊರಿನ ಜನರದ್ದು.
ಇದಕ್ಕಾಗಿ ಜನ ದೇವರನ್ನೇ ಕಬ್ಬಿಣದ ಸರಪಳಿಗಳಿಂದ ಬಂಧಿಸಿ ನಿತ್ಯ ಪೂಜೆ ಮಾಡುತ್ತಿದ್ದಾರೆ. ದೇವಾಲಯದ ಪಕ್ಕದಲ್ಲೇ ಇರುವ ಅಯ್ಯನಕೆರೆ ನೀರು ಊರೊಳಗಿನ ರಂಗನಾಥಸ್ವಾಮಿಗೆ ಸ್ನಾನದ ಜೊತೆ ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾಗುತ್ತಿತ್ತು. ಆದರೆ, ಹಸಿವನ್ನು ತಾಳಲಾರದ ಕೆಂಚರಾಯ ಒಂದೇ ಹೊತ್ತಿಗೆ ನೀರನ್ನು ಕುಡಿದು ಖಾಲಿ ಮಾಡಿದನಂತೆ. ಅದಕ್ಕಾಗಿ ಇಲ್ಲಿನ ಜನ ಕಳೆದ ನಾನೂರು ವರ್ಷಗಳಿಂದ ದೇವರನ್ನು ಸರಪಳಿಯಲ್ಲಿ ಕಟ್ಟಿ ಹಾಕಿ ಬಂಧಿಸಿದ್ದಾರೆ.
ಒಂದು ವೇಳೆ, ದೇವರನ್ನು ಬಂಧನದಿಂದ ಮುಕ್ತಗೊಳಿಸಿದರೆ ಅಯ್ಯನಕೆರೆ ನೀರು ಒಂದೇ ದಿನದಲ್ಲಿ ಖಾಲಿ ಮಾಡಿ ಬಿಡುತ್ತಾನೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಸಖರಾಯಪಟ್ಟಣಕ್ಕೆ ಬಂದ ಭಕ್ತರೆಲ್ಲಾ ರಂಗನಾಥ ಸ್ವಾಮಿಗೆ ಹಣ್ಣು-ಕಾಯಿ ಎಡೆಮಾಡಿ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಪಕ್ಕದಲ್ಲಿಯೇ ಇದ್ದಂತಹ ಕೆಂಚರಾಯನಿಗೆ ಪೂಜೆಯೂ ಇಲ್ಲ. ಎಡೆಯೂ ಇಲ್ಲ. ಅದಕ್ಕಾಗಿ ಕೆಂಚರಾಯ ಹಸಿವು - ಹಸಿವು ಅಂತಾ ಏಳು ಗುಡ್ಡದ ನೀರನ್ನೆಲ್ಲಾ ರಾತ್ರೋ ರಾತ್ರಿ ಕುಡಿದು ಖಾಲಿ ಮಾಡುತ್ತಿದ್ದ ಎಂಬ ಕಾರಣಕ್ಕೆ ಊರನ್ನು ಕಾಯುವ ದೇವರಿಗೆ ಸರಪಳಿ ಬಂಧನ ವಿಧಿಸಲಾಗಿದೆ.
ದೇವರ ಮೈಮೇಲಿನ ಕಬ್ಬಿಣದ ಸರಪಳಿಯನ್ನ ಕಳೆದ ನಾನೂರು ವರ್ಷಗಳು ಕಳೆದರೂ ತೆಗೆದಿಲ್ಲ. ಕೆಂಚರಾಯನನ್ನು ಬಂಧ ಮುಕ್ತ ಮಾಡಿದರೇ ಹಸಿವು ಕಾಣಿಸಿಕೊಂಡು ಕೆರೆಯ ನೀರನ್ನು ಖಾಲಿ ಮಾಡಿ ಬಿಡುತ್ತಾನೆ ಎಂಬ ಭಯದಿಂದ ಇಲ್ಲಿನ ಜನರು ಸರಪಳಿ ಬಿಚ್ಚೋದಕ್ಕೂ ಹೋಗಿಲ್ಲ. ಪ್ರಪಂಚ ಎಷ್ಟೆ ವೇಗವಾಗಿ ಬೆಳೆಯುತ್ತಿದ್ದರೂ ಭಕ್ತಿ,ನಂಬಿಕೆ,ಆಚಾರ, ವಿಚಾರಗಳು ಬದಲಾಗಿಲ್ಲ ಎಂಬುದಕ್ಕೆ ಈ ಘಟನೆ ನೈಜ ಉದಾಹರಣೆಯಾಗಿದೆ.