ಚಿಕ್ಕಮಗಳೂರು : ಕಡೂರು ಹಾಗೂ ಮೂಡಿಗೆರೆ ತಾಲೂಕಿನ ಈ ಲ್ಯಾಂಡ್ ಸ್ಕ್ಯಾಂ ರಾಜ್ಯದಲ್ಲೇ ದೊಡ್ಡದಾಗಿದೆ. ಕಡೂರು ತಹಶೀಲ್ದಾರ್ ಆಗಿದ್ದ ಉಮೇಶ್ 3500 ಎಕರೆ ಅಕ್ರಮ ಮಾಡಿದ್ರೆ, ಮೂಡಿಗೆರೆ ತಹಶೀಲ್ದಾರ್ ಆಗಿದ್ದ ರಮೇಶ್ 2200 ಎಕರೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಹಾಲಿ ತಹಶೀಲ್ದಾರ್ ತಿಪ್ಪೇಸ್ವಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈಗಾಗಲೇ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಡಿಗೆರೆಯಲ್ಲಿ 2019-2021ರ ವರೆಗೆ ತಹಶೀಲ್ದಾರ್ ಆಗಿದ್ದ ರಮೇಶ್ ಬಾಳೂರು ಹೋಬಳಿಯ ಹಾದಿಓಣಿ ಗ್ರಾಮದ ಸರ್ವೇ ನಂಬರ್ 21ರಲ್ಲಿ 7 ಜನಕ್ಕೆ, ಕೂವೆ ಗ್ರಾಮದ ಸರ್ವೇ ನಂಬರ್ 87ರಲ್ಲಿ 6 ಜನ ಸೇರಿದಂತೆ ಒಟ್ಟು 13 ಜನಕ್ಕೆ ಭೂಮಿ ಮಂಜೂರು ಮಾಡಿದ್ದಾರೆ. ಆದರೆ ಅರ್ಜಿ ಇಲ್ಲ, ಕಮಿಟಿಯಲ್ಲಿ ಫೈಲ್ ಇಲ್ಲ, ಸಾಗುವಳಿ ಚೀಟಿಯೂ ಇಲ್ಲ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ಮೂಡಿಗೆರೆ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಬಾಳೂರು ಹೋಬಳಿ ಸರ್ವೇ ನಂಬರ್ 21ರಲ್ಲಿ 7 ಜನಕ್ಕೆ ಅಕ್ರಮವಾಗಿ ಖಾತೆ ಮಾಡಿದ್ದಾರೆ. ಅಕ್ರಮವಾಗಿ ಅಂದರೆ ಯಾವುದೇ ಅರ್ಜಿ ಇಲ್ಲ. ಸಮಿತಿಗೆ ಮಂಡಿಸಿಲ್ಲ. ಸಾಗುವಳಿ ಚೀಟಿ ನೀಡಿಲ್ಲ. ಈ ಬಗ್ಗೆ ಡಿಸಿ ಆಫೀಸ್ನಲ್ಲಿ ಕಂಪ್ಲೇಂಟ್ ಆಗಿತ್ತು. ಡಿಸಿಯವರು ಡೈರೆಕ್ಷನ್ಸ್ ಕೊಟ್ರು. ಅದರಲ್ಲಿ ಕೋರ್ಟ್ನಲ್ಲಿ 7 ಜನರದ್ದು ಖಾತೆ ರದ್ದಾಗಿತ್ತು. ಇನ್ನು 6 ಜನರದ್ದು ತನಿಖೆ ನಡೆಯುತ್ತಿದೆ. ಖಾತೆ ರದ್ದುಪಡಿಸಿ ನಮಗೆ ನಿರ್ದೇಶನ ಕೊಟ್ಟಿದ್ದಾರೆ ಎಂದರು.