ಚಿಕ್ಕಮಗಳೂರು :ಕಾಫಿನಾಡಿನಲ್ಲಿ ವರ್ಷಧಾರೆ ಅವಾಂತರ ಸೃಷ್ಟಿಸಿದೆ. ಅಕಾಲಿಕ ಮಳೆಗೆ ಕಾಫಿ ಬೆಳೆ, ಅಡಿಕೆ, ಭತ್ತ, ಕಾಳುಮೆಣಸು ಬೆಳೆ ನಾಶವಾಗುತ್ತಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರೆದಿದೆ.
ಜನರು ಮನೆಯಿಂದ ಹೊರ ಬಾರದಂತಾಗಿದೆ. ಈ ಬೆನ್ನಲ್ಲೇ ಹವಾಮಾನ ಇಲಾಖೆ ಇನ್ನೂ ಮೂರು ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ಈಗಾಗಲೇ ನಿರಂತರ ಮಳೆಗೆ ಬೇಸತ್ತಿರುವ ರೈತರು ಮತ್ತು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳೆ ನಾಶದ ಆತಂಕದಲ್ಲಿ ಚಿಕ್ಕಮಗಳೂರು ಜಿಲ್ಲೆಯ ರೈತರು.. ಸದ್ಯ ಕಾಫಿಬೆಳೆ ಕೊಯ್ಲಿಗೆ ಬಂದಿದೆ. ಮಳೆಗೆ ಕಾಫಿ ಹಣ್ಣು ಗಿಡದಿಂದ ಉದುರುತ್ತಿದೆ. ಅಲ್ಲದೆ, ಕಾಫಿ ಹಣ್ಣು ಕೊಯ್ಲು ನಡೆಸಲು ಮತ್ತು ಒಣಗಿಸಿ ಸಂಸ್ಕರಣೆ ಮಾಡಲು ಸಾಧ್ಯವಾಗದೆ ಬೆಳೆಗಾರರು ಪರದಾಡುತ್ತಿದ್ದಾರೆ. ಕಾಫಿ ಬೀಜವನ್ನು ಒಣಗಿಸಲು ಸಾಧ್ಯವಾಗದೆ ಮಳೆಯಿಂದ ರಕ್ಷಿಸಿಕೊಳ್ಳಲು ಮನೆಯ ಒಳಗೆ ಕಾಫಿ ಜೀಜವನ್ನು ಒಣಗಿಸುತ್ತಿದ್ದಾರೆ.
ಅಡಿಕೆ ಬೆಳೆ ಕೊಯ್ಲಿಗೆ ಬಂದಿದೆ. ಅಕಾಲಿಕ ಮಳೆಯಿಂದ ಗೊನೆ ತೆಗೆಯಲು ಸಾಧ್ಯವಾಗದೆ ಅಡಿಕೆ ಹಣ್ಣಾಗಿ ಉದುರುತ್ತಿದೆ. ಅಡಿಕೆ ಗೊನೆ ತೆಗೆದವರು ಅಡಿಕೆ ಒಣಗಿಸಲು ನಿರಂತರ ಮಳೆಯಿಂದ ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಶೆಡ್‌ಗಳಲ್ಲಿ ಬೆಂಕಿ ಹಾಕಿ ಅಡಿಕೆ ಒಣಗಿಸುತ್ತಿದ್ದಾರೆ.
ಅದು ಸರಿಯಾಗಿ ಒಣಗದೆ, ಕ್ವಾಲಿಟಿಯೂ ಹಾಳಾಗಿ ಬೂಸ್ ಹಿಡಿಯುತ್ತಿದೆ. ಮೂಡಿಗೆರೆ ತಾಲೂಕು ನಿಡ್ಗಲ್, ಗಬ್ಗಲ್, ಕೆಳಗೂರು ಹಾಗೂ ಬಾಳೂರು ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಅಕಾಲಿಕ ಮಳೆಯಿಂದ ಬೆಳೆಗಾರರು ಹೈರಾಣಾಗಿದ್ದಾರೆ.
ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಭತ್ತ ಕಟಾವಿಗೆ ಬಂದಿದೆ. ನಿರಂತರ ಮಳೆಗೆ ಕಟಾವು ಮಾಡಲು ಸಾಧ್ಯವಾಗದೆ ಬೆಳೆ ಗದ್ದೆಯಲ್ಲೇ ಹಾಳಾಗುತ್ತಿದೆ. ಬಯಲುಸೀಮೆ ಭಾಗದಲ್ಲಿ ತರಕಾರಿ ಬೆಳೆ ಸೇರಿದಂತೆ ಇತರೆ ಬೆಳೆಗಳು ಹಾಳಾಗುತ್ತಿವೆ. ಅಡಿಕೆ, ತೆಂಗಿನ ತೋಟಗಳಲ್ಲಿ ನೀರು ನಿಂತಿದೆ.
ಬೆಳೆಗಾರರು ತೋಟಗಳನ್ನೇ ಕಳೆದುಕೊಳ್ಳುವ ಆತಂಕ ಎದುರಾಗಿದೆ. ನಿರಂತರ ಮಳೆಯಿಂದ ಶೀತದ ಪ್ರಮಾಣ ಜಾಸ್ತಿಯಾಗಿದೆ. ಕಾಫಿ, ಅಡಿಕೆ, ಕಾಳು ಮೆಣಸು ತೋಟಗಳನ್ನು ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ.
ಭಾರಿ ಶೀತದಿಂದ ತೋಟಗಳಿಗೆ ಕೊಳೆ ರೋಗ ಬಾಧಿಸುವ ಆತಂಕ ರೈತರಲ್ಲಿದೆ. ಶೀತದಿಂದ ಕಾಫಿ ಗಿಡಗಳು, ಅಡಿಕೆ ಗಿಡ, ಕಾಳುಮೆಣಸು ಬಳ್ಳಿಗಳು ಸಾಯುತ್ತಿವೆ. ಅಡಿಕೆಗೆ ಈಗಾಗಲೇ ಎಲೆ ಚುಕ್ಕಿರೋಗ, ಹಳದಿ ಎಲೆರೋಗದಿಂದ ತೋಟಗಳು ನಾಶವಾಗಿವೆ. ಅಳಿದುಳಿದ ತೋಟಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.
ಮುಂದುವರೆದ ವರುಣಾರ್ಭಟ :ಮಲೆನಾಡು ತಾಲೂಕುಗಳಾದ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ಭಾಗದಲ್ಲಿ ನಿರಂತರವಾಗಿ ಜಿಟಿಜಿಟಿ ಮಳೆಯಾಗುತ್ತಿದೆ. ಬಯಲುಸೀಮೆ ತಾಲೂಕು ಕಡೂರು ಸುತ್ತಮುತ್ತ ಭಾರಿ ಮಳೆಯಾಗಿದೆ. ಬೀರೂರು ಮತ್ತು ತರೀಕೆರೆ ಭಾಗದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ.