ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಡವರಿಗೆ ಉಚಿತವಾಗಿ ನೀಡುತ್ತಿರುವ ಪಡಿತರದಲ್ಲೂ ಗೋಲ್ಮಾಲ್ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಉಚಿತವಾಗಿ ನೀಡುವ ಬಡವರ ಪಡಿತರಕ್ಕೆ ಕನ್ನ ಹಾಕಲಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಹಲವು ನ್ಯಾಯಬೆಲೆ ಅಂಗಡಿಗಳಲ್ಲಿ ಈ ಗೋಲ್ಮಾಲ್ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರಲ್ಲಿ ಬಡವರ ಪಡಿತರ ಹಂಚಿಕೆಯಲ್ಲೂ ಗೋಲ್ಮಾಲ್ ಆರೋಪ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿಗಿಂತ ಕಡಿಮೆ ಪಡಿತರ ನೀಡಿ ಬಡವರಿಗೆ ಮೋಸ ಮಾಡಲಾಗುತ್ತಿದ್ದು, ಇಲ್ಲಿನ ಸ್ಥಳೀಯರು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರ ಗಮನಕ್ಕೂ ತಂದಿದ್ದಾರೆ.
ಈಗಾಗಲೇ ಸಚಿವ ಸಿ.ಟಿ.ರವಿ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೂಚನೆ ನೀಡಿದ್ದಾರೆ. ಸಾಗಾಣಿಕೆ ವೆಚ್ಚ, ಹಮಾಲಿ ಕೂಲಿ, ಗೋಣಿ ಚೀಲದ ಖರ್ಚು ಜನರ ಮೇಲೆ ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಬಡ ಜನರಿಂದ ಕೆಲ ನ್ಯಾಯಬೆಲೆ ಅಂಗಡಿಗಳು ಹಣ ವಸೂಲಿ ಮಾಡುತ್ತಿದ್ದು, ಗಬ್ಗಲ್, ನಿಡುವಾಳೆ, ಕೂವೆ ನ್ಯಾಯಬೆಲೆ ಅಂಗಡಿಗಳಲ್ಲಿ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಡವರ ಅಂತ್ಯೋದಯ ಪಡಿತರದಲ್ಲೂ ಮೋಸ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.