ಚಿಕ್ಕಮಗಳೂರು :ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ದೇಶ ಮತ್ತು ರಾಜ್ಯದಲ್ಲಿ ನಡೆದಿರುವ ಪ್ರಮುಖ ಹಗರಣಗಳನ್ನು ಪಟ್ಟಿ ಮಾಡಿದರೆ ಶೇ.90ರಷ್ಟು ಹಗರಣಗಳು ಕಾಂಗ್ರೆಸ್ ಅವಧಿಯಲ್ಲೇ ನಡೆದಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.
ಚಿಕ್ಕಮಗಳೂರು ನಗರದಲ್ಲಿಂದು ಮಾತನಾಡಿದ ಅವರು, ''ದೇಶದಲ್ಲಿ ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ. ಇದೀಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಿನ ಕೈ ಶಾಸಕರು ಒಂದೇ ದಿನ ವಸೂಲಿಗೆ ಹೊರಟಿದ್ದಾರೆ. ನಾವು ಚುನಾವಣೆ ಗೆಲ್ಲಲು ಎಷ್ಟೆಲ್ಲಾ ಖರ್ಚು ಮಾಡಿದ್ದೇವೆ. ದಾನ-ಧರ್ಮಕ್ಕೆ ರಾಜಕಾರಣ ಮಾಡ್ತಿದ್ದೀವಾ?. ಖರ್ಚು ಮಾಡಿರೋದು ವಸೂಲಾಗ್ಬೇಕು. ಇಲ್ಲಾಂದ್ರೆ ನಮ್ಮ ಹೆಂಡ್ತಿ ಮಕ್ಕಳನ್ನು ಬೀದಿಯಲ್ಲಿ ನಿಲ್ಲಿಸ್ಬೇಕಾ ಅಂತ ಮಾತನಾಡುವ ಸ್ಥಿತಿ ಅವರದ್ದು'' ಎಂದರು.
''ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ 40% ಕಮಿಷನ್ ದಂಧೆ ಈಗ 15% ಆಗಿರಬಹುದು ಎಂದು ಮುಖ್ಯಮಂತ್ರಿಗಳು ಹೇಳಿರುವುದನ್ನು ಗಮನಿಸಿದ್ದೇನೆ. ಆದರೆ, ನೀವು ಹೇಳುತ್ತಿರುವ 15% ಹಳೆಯ ವಿಚಾರ. ಈಗ ಅದು 50% ದಾಟಿರಬಹುದು'' ಎಂದು ಪ್ರತ್ಯುತ್ತರ ನೀಡಿದರು.
ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ: ''ಸರ್ಕಾರ ಪ್ರಾಮಾಣಿಕ ಅನ್ನೋದಾಗಿದ್ರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ ಎಂದು ಸಿ.ಟಿ.ರವಿ ಹೇಳಿದರು. ಇದೇ ಗುತ್ತಿಗೆದಾರರ ಬಳಿಯಿಂದ ನನಗೆ ಬಂದಿರುವ ಮಾಹಿತಿ ಪ್ರಕಾರ, ಮೊದಲಿಗೆ 7% ಕಮಿಷನ್ ನಿಗದಿಪಡಿಸಿದ್ರು. ಆದರೆ, ಮಧ್ಯವರ್ತಿಗಳು 10% ಗೆ ಪಟ್ಟು ಹಿಡಿದ ಬಳಿಕ ಇದೀಗ 15% ಫಿಕ್ಸ್ ಮಾಡಿ, ಅಷ್ಟು ಕೊಟ್ಟರೆ ಮಾತ್ರ ಬಿಲ್ ಕ್ಲಿಯರ್ ಮಾಡುವುದಾಗಿ ಹೇಳಿದ್ದಾರೆ'' ಎಂದು ಹೇಳಿದರು.