ಚಿಕ್ಕಮಗಳೂರು: ಆಗಾಗ್ಗೆ ದೇವಸ್ಥಾನ, ಪೂಜೆ, ಜಪ-ತಪ ಅಂತ ದೇವರುಗಳ ಮೊರೆ ಹೋಗುವ ಮುಖ್ಯಮಂತ್ರಿ ಕುಮಾರಸ್ವಾಮಿ, ಇದೀಗ ಜಿಲ್ಲೆಯ ಮತ್ತೊಂದು ದೇವರನ್ನು ಕಾಣಲು ಬರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ದೇವಸ್ಥಾನ ಎಲ್ಲಿದೆ? ಸಿಎಂ ಇದೇ ದೇವಸ್ಥಾನಕ್ಕೆ ಏಕೆ ಬರುತ್ತಿದ್ದಾರೆ ಅನ್ನೋದು ಮಾತ್ರ ನಿಗೂಢವಾಗಿದೆ.
ಆಗಾಗ್ಗೆ ಶೃಂಗೇರಿ ಶಾರದಾ ಪೀಠಕ್ಕೆ ಬಂದು ದೇವಿಯ ದರ್ಶನ ಪಡೆದು ಹೋಗುವ ಕುಮಾರಸ್ವಾಮಿ, ಇದೀಗ ಋಷ್ಯ ಶೃಂಗೇಶ್ವರನನ್ನು ಕಾಣಲು ಆಗಮಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈವರೆಗೆ ಶಾರದಾ ಪೀಠಕ್ಕೆ ಭೇಟಿ ನೀಡಿ ವಿವಿಧ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದರು. ಆದರೆ, ಇದೀಗ ಋಷ್ಯ ಶೃಂಗೇಶ್ವರನನ್ನು ದರ್ಶನಕ್ಕೆ ಬರಲು ಕಾರಣವೇನು ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಋಷ್ಯ ಶೃಂಗೇಶ್ವರ ಸಚಿವ ಡಿ.ಕೆ. ಶಿವಕುಮಾರ್ ಅವರು ನಂಬಿದ ದೇವರು ಅನ್ನೋದು ವಿಶೇಷವಾದ್ರೆ ಇದು ಮಳೆ ತರಿಸುವ ದೇವರು ಅನ್ನೋದು ಮತ್ತೊಂದು ವಿಶೇಷ.