ಚಿಕ್ಕಮಗಳೂರು: ಪಕ್ಷದ ಭವಿಷ್ಯ ಉಳಿಯಬೇಕಾದರೆ ಬಿಜೆಪಿ ಗೆಲ್ಲಿಸಿ ಎಂದು ಬಿಜೆಪಿ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಜಿಲ್ಲೆಯ ಮತ್ತು ಜನರ ಅಭಿವೃದ್ಧಿಯಾಗಬೇಕಾ? ಅಥವಾ ಬಿಜೆಪಿಯವರ ವೈಯಕ್ತಿಕ ಅಭಿವೃದ್ಧಿಯಾಗಬೇಕಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಸಿದ್ಧಾಂತದ ವಿರುದ್ಧ ಪ್ರಶ್ನೆಗಳ ಸುರಿಮಳೆ ಸುರಿಸಿದರು.
ಬಿಜೆಪಿಗೆ ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿ ಬೇಕಿಲ್ಲ: ಕುಮಾರಸ್ವಾಮಿ - etv bharat
ವೈಯಕ್ತಿಕ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವ ಬಿಜೆಪಿ ಬೇಕಾ, ಉತ್ತಮ ಆಡಳಿತ ನೀಡುತ್ತಿರುವ ಸಮ್ಮಿಶ್ರ ಸರ್ಕಾರ ಬೇಕಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಚಿಕ್ಕಮಗಳೂರಿನಲ್ಲಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಕಡೂರಿನಲ್ಲಿ ಕಾರು ನಿಲ್ಲಿಸಿ ಕೆಲ ನಿಮಿಷಗಳ ಕಾಲ ಅಭಿಮಾನಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಮೊನ್ನೆ ಹಾಸನದಲ್ಲಿ ತಮ್ಮ ಅಭಿವೃದ್ಧಿ ಕುರಿತು ಹೇಳಿಕೆ ನೀಡಿದ್ದಾರೆ. ಇದು ಅವರ ವೈಯಕ್ತಿಕ ಅಭಿವೃದ್ಧಿಯ ಕನಸು. ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅಭಿವೃದ್ಧಿಗೆ ಇನ್ನೂ ಅನುಕೂಲ. ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ಸರಿಯಿದೆ ಎಂದು ಪುನರುಚ್ಚರಿಸಿದರು.
ಕಡೂರು ತಾಲೂಕಿನ ಕೆಎಲ್ವಿ ವೃತ್ತಕ್ಕೆ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆಯೇ ನೂರಾರು ಅಭಿಮಾನಿಗಳು ಅವರನ್ನು ಸನ್ಮಾನಿಸಿ ಅವರ ಪರ ಘೋಷಣೆ ಕೂಗಿದರು. ಇನ್ನು ಶಿವಮೊಗ್ಗದಲ್ಲಿನ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಇಂದು ನಾಮಪತ್ರ ಸಲ್ಲಿಸಲಿದ್ದು, ಕುಮಾರಸ್ವಾಮಿ ಅಲ್ಲಿಗೆ ಪ್ರಯಾಣ ಬೆಳೆಸಿದರು.