ಚಿಕ್ಕಮಗಳೂರು:ನೂತನ ಶಾಸಕರ ಅಭಿನಂದನಾ ಕಾರ್ಯಾಕ್ರಮದಲ್ಲಿ ಕೇವಲ ಒಂದು ಸಿನಿಮಾ ಹಾಡಿಗೆ ಕೊಲೆ ನಡೆದಿರುವ ಘಟನೆ ಶನಿವಾರ ತರೀಕೆರೆ ಪಟ್ಟಣದಲ್ಲಿ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಚೌಡೇಶ್ವರಿ ಬೀದಿಯ ನಿವಾಸಿ ವರುಣ್ ಹತ್ಯೆಯಾದ ಯುವಕ.
ಘಟನೆ ಹಿನ್ನೆಲೆ: ಕಾಂಗ್ರೆಸ್ ಅಭ್ಯರ್ಥಿ ಜಿ.ಹೆಚ್.ಶ್ರೀನಿವಾಸ್ ಗೆಲುವು ಸಾಧಿಸಿದ ಹಿನ್ನೆಲೆ ನೂತನ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ತರೀಕೆರೆ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ಕೂಡ ಇತ್ತು. ಕಾರ್ಯಕ್ರಮಕ್ಕೆ ನೆರೆದಿದ್ದ ಎಲ್ಲರೂ ಮಧ್ಯಾಹ್ನವೇ ಕುಣಿದು ಕುಪ್ಪಳಿಸಲು ಪ್ರಾರಂಭಿಸಿದ್ದರು.
ಈ ವೇಳೆ ಮೃತ ವರುಣ್ ಹಾಗೂ ಕೊಲೆ ಆರೋಪಿ ಮೂರ್ತಿ ತಂಡದ ಮಧ್ಯೆ ಒಂದೇ ಒಂದು ಸಿನಿಮಾ ಹಾಡಿಗೆ ಮಾತಿನ ಚಕಮಕಿ ನಡೆದಿದೆ. ಈ ಜಗಳ ಸ್ವಲ್ಪದರಲ್ಲೇ ಮುಗಿದಿದ್ದು ಎಲ್ಲರೂ ಸುಮ್ಮನಾಗಿದ್ದರು. ಆದರೆ, ರಾತ್ರಿ 9.30 ರ ವೇಳೆಗೆ ಹಾಡಿನ ಗಲಾಟೆ ನೆನಪಾಗಿ ಮತ್ತೆ ಕಾಳಗ ಮುಂದುವರೆಸಿದ್ದಾರೆ. ಆಗ ಜಗಳ ವಿಕೋಪಕ್ಕೆ ತಿರುಗಿ ಮೂರ್ತಿ ತಂಡದವರು ವರುಣ್ ಪಕ್ಕೆಗೆ ಇರಿದು, ಮಂಜು ಹಾಗೂ ಸಂಜು ಎಂಬುವರ ಕಾಲಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
ಪಕ್ಕೆಗೆ ಚಾಕು ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗುತ್ತಿದ್ದ 28 ವರ್ಷದ ವರುಣ್ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತನ ಸಂಬಂಧಿಗಳು ಕೊಲೆ ಆರೋಪಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಪರ್ಯಾಸವೆಂದರೆ ಮೃತ ವರುಣ್ ಹಾಗೂ ಕೊಲೆ ಆರೋಪಿ 12 ಜನ ಕೂಡ ಸ್ನೇಹಿತರೇ. ಇವರ ಸ್ನೇಹದ ಬಗ್ಗೆ ಇಡೀ ಊರೇ ಮಾತನಾಡುತ್ತೆ. ಆದರೆ ಇಂಥ ಗೆಳೆಯರ ಮಧ್ಯೆ ಹಾಡಿನ ವಿಚಾರದಲ್ಲಿ ಆರಂಭವಾದ ಆ ವಿವಾದ ಕೊಲೆಯಲ್ಲಿ ಅಂತ್ಯವಾಗಿರೋದು ನಿಜಕ್ಕೂ ದುರಂತ.