ಕರ್ನಾಟಕ

karnataka

ETV Bharat / state

ಮನೆ ಮನೆಯಲ್ಲೂ ಬ್ಲ್ಯಾಕ್ ಬೋರ್ಡ್.. ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ನಡೆ ಆರಂಭಿಸಿದ ಚಿಕ್ಕಮಗಳೂರು ಶಿಕ್ಷಕರು

ಕೊರೊನಾ ಹೋಗಿ ಶಾಲೆ ಆರಂಭವಾದ್ರೆ ಸಾಕು ಅಂತ ಬೇಡಿಕೊಳ್ಳುತ್ತಿದ್ದರು. ಆದರೀಗ, ಶಿಕ್ಷಕರ ಈ ನಡೆಯಿಂದ ಮಕ್ಕಳು ಎಲ್ಲೂ ಹೋಗ್ತಿಲ್ಲ. ಶಾಲೆಗೆ ಹೋಗುವಂತೆ ರೆಡಿಯಾಗಿ ಮನೆ ಬಾಗಿಲಲ್ಲಿ ಶಿಕ್ಷಕರ ದಾರಿ ಕಾಯ್ತಿದ್ದಾರೆ..

chikkamagaluru
ಮಕ್ಕಳ ಮನೆಗೇ ತೆರಳಿ ಪಾಠ ಮಾಡುತ್ತಿರುವ ಶಿಕ್ಷಕರು

By

Published : Mar 29, 2021, 7:12 PM IST

ಚಿಕ್ಕಮಗಳೂರು :ಅತ್ತ ವಿದ್ಯಾಗಮ ನಿಂತು ಹೋಗಿದೆ. ಇತ್ತ ಹೆತ್ತವರು ಕೂಲಿಗೆ ಹೋಗುತ್ತಿದ್ದರು. ಮಕ್ಕಳು ಏನ್ ಮಾಡುತ್ತಿದ್ದಾರೋ ಅಂತ ಹೆತ್ತವರಿಗೂ ಚಿಂತೆ. ಜೊತೆಗೆ ಮಕ್ಕಳ ಶಿಕ್ಷಣ ಹಾಳಾಗುತ್ತಿದೆ ಅಂತ ಶಿಕ್ಷಕರಿಗೂ ಯೋಚನೆ.

ಆದರೆ, ಇದೀಗ ಶಾಲೆ ಇಲ್ಲದಿದ್ದರೂ ಮಕ್ಕಳು ಮಾತ್ರ ಅಯ್ಯೋ.. ಮೇಷ್ಟ್ರು ಬರ್ತಾರೆ.. ಹೊಡೀತಾರೆ ಅಂತ ಬೆಳಗ್ಗೆಯಿಂದ ಸಂಜೆವರೆಗೂ ಕೈಯಲ್ಲಿ ಚಾಕ್ ಪೀಸ್ ಇಟ್ಟುಕೊಂಡು ಮನೆ ಬಾಗಿಲಲ್ಲಿ ಶಿಕ್ಷಕರ ದಾರಿ ಕಾಯುತ್ತಿದ್ದಾರೆ.

ಮಕ್ಕಳ ಮನೆಗೇ ತೆರಳಿ ಪಾಠ ಮಾಡುತ್ತಿರುವ ಶಿಕ್ಷಕರು..

ಚಿಕ್ಕಮಗಳೂರಿನ ಪಾದಮನೆ ಗ್ರಾಮ ಹೆಚ್ಚು ಕಡಿಮೆ ಕಾಡಂಚಿನ ಒಂದು ಹಳ್ಳಿ. ಈ ಊರಿನಲ್ಲಿ ಸುಮಾರು 50-60 ಮನೆಗಳಿವೆ. ಸುಮಾರು 40 ಮನೆಗಳ ಮುಂದೆ ಬ್ಲಾಕ್ ಬೋರ್ಡ್ ಫಿಕ್ಸ್ ಆಗಿದೆ. ಕೆಲ ಮನೆಗಳ ಮುಂದೆ ಬ್ಲಾಕ್ ಚಾರ್ಟ್ ನೇತಾಡ್ತಿದೆ. ಇದಕ್ಕೆಲ್ಲ ಕಾರಣ ಮಕ್ಕಳ ಭವಿಷ್ಯ ರೂಪಿಸಬೇಕು ಎಂದು ಪಣ ತೊಟ್ಟ ಶಿಕ್ಷಕರ ತಂಡ.

ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಕಾಣು ಎಂಬ ಮಾತಿನಂತೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಗ್ರಾಮದ ಶಾಲೆಯ ಶಿಕ್ಷಕರಾದ ಸೌಮ್ಯ ಹಾಗೂ ತೀರ್ಥಕುಮಾರ್ ಅವರ ಮಾರ್ಗದರ್ಶನಲ್ಲಿ ಇಡೀ ಊರಿನ ಮನೆ ಮುಂದಿನ ಗೋಡೆಗೆ ಬ್ಲಾಕ್ ಬೋರ್ಡ್ ಹಾಕಿದ್ದಾರೆ. ಶಿಕ್ಷಕರೇ ಹಣ ಹಾಕಿಕೊಂಡು ಬಣ್ಣ ತಂದು ಬಳಿದಿದ್ದಾರೆ. ಕೆಲ ಮನೆಗಳಿಗೆ ಚಾರ್ಟ್ ಹಾಕಿದ್ದಾರೆ.

ಸದ್ಯಕ್ಕೆ ಪ್ರಾಥಮಿಕ ಶಾಲಾ ತರಗತಿ ನಡೆಯುತ್ತಿಲ್ಲ. ಆದರೆ, ಈ ಊರಿನಲ್ಲಿ ಬೆಳಗ್ಗೆ 10 ರಿಂದ ಸಂಜೆ 4.30ರ ತನಕ ಎಂದಿನಂತೆ ತರಗಳು ನಡೆಯುತ್ತಿವೆ. ಇಷ್ಟು ದಿನ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಈಗ ಶಿಕ್ಷಕರೆ ಪ್ರತಿ ಮಗುವಿನ ಮನೆ ಬಾಗಿಲಿಗೆ ಬಂದು ಪಾಠ ಮಾಡ್ತಿದ್ದಾರೆ. ಮಕ್ಕಳು ಕೂಡ ಅಷ್ಟೇ ಆಸಕ್ತಿಯಿಂದ ಪಾಠ ಕೇಳುತ್ತಿದ್ದಾರೆ.

ವಿದ್ಯಾಗಮ ನಿಲ್ಲಿಸಿದ ಮೇಲೆ ಮಕ್ಕಳು ಕೈಗೆ ಸಿಗುತ್ತಿರಲಿಲ್ಲ. ಹೆಣ್ಣು ಮಕ್ಕಳು ಒಂದೆಡೆ ಸೇರಿ ಆಟವಾಡುತ್ತಿದ್ದರು. ಹುಡುಗರು ಕಾಡುಮೇಡು ಸುತ್ತುತ್ತಾ ಅಕ್ಕಪಕ್ಕದ ಕೆರೆಗೆ ಈಜಲು ಹೋಗುತ್ತಿದ್ದರು.

ಕೊರೊನಾ ಹೋಗಿ ಶಾಲೆ ಆರಂಭವಾದ್ರೆ ಸಾಕು ಅಂತ ಬೇಡಿಕೊಳ್ಳುತ್ತಿದ್ದರು. ಆದರೀಗ, ಶಿಕ್ಷಕರ ಈ ನಡೆಯಿಂದ ಮಕ್ಕಳು ಎಲ್ಲೂ ಹೋಗ್ತಿಲ್ಲ. ಶಾಲೆಗೆ ಹೋಗುವಂತೆ ರೆಡಿಯಾಗಿ ಮನೆ ಬಾಗಿಲಲ್ಲಿ ಶಿಕ್ಷಕರ ದಾರಿ ಕಾಯ್ತಿದ್ದಾರೆ.

ಬೆಳಗ್ಗೆ ಬರೋ ಶಿಕ್ಷಕರು ಸಂಜೆವರೆಗೂ ಇಡೀ ಹಳ್ಳಿಯಲ್ಲಿ ದಿನಕ್ಕೆ ಏಳೆಂಟು ರೌಂಡ್ ಹಾಕಿ ಮಕ್ಕಳಿಗೆ ಮನೆ ಬಾಗಿಲಲ್ಲೇ ಪಾಠ ಮಾಡ್ತಿದ್ದಾರೆ. ಈಗ ಹೆತ್ತವರು ನೆಮ್ಮದಿಯಾಗಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರಂತೆ ಜವಾಬ್ದಾರಿ ಹೊತ್ತಿರುವ ಶಿಕ್ಷಕರ ತಂಡಕ್ಕೆ ಊರಿನ ಜನ ಕೂಡ ನಾವು ಋಣಿ ಎಂದು ಹೇಳುತ್ತಿದ್ದಾರೆ.

ABOUT THE AUTHOR

...view details