ಚಿಕ್ಕಮಗಳೂರು:ಇಡೀ ಪ್ರಪಂಚವೇ ಕಾತರದಿಂದ ಕಾಯುತ್ತಿದ್ದ, ಭಾರತದ ಕನಸಿನ ಯೋಜನೆ ಚಂದ್ರಯಾನ 3 ನಿನ್ನೆಯಷ್ಟೆ ಇಸ್ರೋ ಕೇಂದ್ರದಿಂದ ಯಶಸ್ವಿಯಾಗಿ ಬಾಹ್ಯಾಕಾಶ ಕಕ್ಷೆಗೆ ಉಡಾವಣೆಗೊಂಡಿದೆ. ಚಂದ್ರಯಾನ 3 ಯೋಜನೆ ಹಾಗೂ ಇದರ ಯಶಸ್ವಿ ಉಡಾವಣೆಯ ಹಿಂದೆ ಹಲವಾರು ವಿಜ್ಞಾನಿಗಳ ಪರಿಶ್ರಮವಿದೆ. ದೇಶದ ಬೇರೆ ಬೇರೆ ಜಿಲ್ಲೆಗಳ ವಿಜ್ಞಾನಿಗಳು ಈ ಯೋಜನೆಗಾಗಿ ಹಗಲು ಇರುಳು ಕೆಲಸ ಮಾಡಿದ್ದಾರೆ.
ಇದೀಗ ಆಂಧ್ರಪ್ರದೇಶದ ಶ್ರೀ ಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿದ ಚಂದ್ರಯಾನ 3 ರ ತಂಡದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಯುವತಿ ಭಾಗವಹಿಸಿದ್ದು, ಜಿಲ್ಲೆಯ ಜನರ ಸಂತಸ ಸಂಭ್ರಮಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯ, ಬಾಳೆಹೊನ್ನೂರು ಸಮೀಪದ ತುಪ್ಪೂರು ಗ್ರಾಮದ ಯುವತಿ ಇರುವುದು ಆ ಜಿಲ್ಲೆಗೆ ಮಾತ್ರವಲ್ಲದೇ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದಿದೆ.
ಬಾಳೆಹೊನ್ನೂರು ನಗರದಲ್ಲಿ ಕಾಫಿ ವ್ಯವಹಾರ ಮಾಡುತ್ತಿರುವ ಕೇಶವ ಮೂರ್ತಿ, ಮಂಗಳ ದಂಪತಿಯ ಪುತ್ರಿ ಡಾ. ಕೆ. ನಂದಿನಿ ಚಂದ್ರಯಾನ 3 ತಂಡದಲ್ಲಿ ಇದ್ದು, ನಿನ್ನೆ ನಡೆದ ಯಶಸ್ವಿ ಉಡಾವಣೆಯಲ್ಲಿಯೂ ಈಕೆ ಪಾಲ್ಗೊಂಡಿರುವುದು ಆಕೆಯ ಕುಟುಂಬಸ್ಥರು ಸೇರಿದಂತೆ ಸ್ಥಳೀಯರಲ್ಲಿ ಸಂತೋಷ ಹಾಗೂ ಸಂಭ್ರಮ ಸಡಗರ ತರಿಸಿದೆ. ಡಾ. ನಂದಿನಿ ಕಳೆದ 8 ವರ್ಷಗಳಿಂದ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು 2019 ರ ಚಂದ್ರಯಾನ 2 ರ ತಂಡದಲ್ಲೂ ಭಾಗವಹಿಸಿದ್ದರು. ಸತತ ಎರಡನೇ ಬಾರಿಯೂ ಕಾರ್ಯ ನಿರ್ವಹಿಸಿ ಬಾಳೆಹೊನ್ನೂರಿಗೆ ಕೀರ್ತಿ ತರುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಂದಿನಿ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್‌ನಲ್ಲಿ ಮಾಡಿ, ನಂತರ 12ನೇ ತರಗತಿಯವರೆಗೆ ಸೀಗೋಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು. ನಂತರ ಮೂಡುಬಿದ್ರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಬಿಎಸ್ಸಿ, ಎಂಎಸ್ಸಿ ವಿದ್ಯಾಭ್ಯಾಸ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್‌ನಲ್ಲಿ ಪೂರೈಸಿದ್ದಾರೆ. ಇದೇ ಸಂಸ್ಥೆಯಲ್ಲಿ 5 ವರ್ಷಗಳ ಪಿಎಚ್‌ಡಿ ಪೂರೈಸಿ, ನಂತರ ಬೆಂಗಳೂರು ಇಸ್ರೋದಲ್ಲಿ ಉದ್ಯೋಗದಲ್ಲಿದ್ದಾರೆ. ಅಲ್ಲದೇ ಅವರ ಹುಟ್ಟುಹಬ್ಬದ ದಿನದಂದೇ ಮಹತ್ವದ ಕಾರ್ಯ ನಡೆದಿದ್ದು, ಕುಟುಂಬದವರಲ್ಲಿ ಹರ್ಷ ಮನೆ ಮಾಡಿದೆ. ನನ್ನ ಮಗಳು ಇನ್ನಷ್ಟು ಸಾಧನೆ ಮಾಡಲಿ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ರಾಜ್ಯ ಹಾಗೂ ರಾಷ್ಟ್ರಕ್ಕೆ ಉತ್ತಮ ಹೆಸರು ತರಲಿ ಎಂದು ಅವರ ತಂದೆ ಕೇಶವ ಮೂರ್ತಿ ಹಾರೈಸಿದ್ದಾರೆ.
ಇದನ್ನೂ ಓದಿ:Chandrayaan-3: ಚಂದ್ರಯಾನಕ್ಕೆ ಎರಡು ದಶಕ... 2003 ರಿಂದ ಸಾಗಿ ಬಂದ ದಾರಿ