ಚಿಕ್ಕಮಗಳೂರು : ರಾಜ್ಯದಲ್ಲಿಯೇ ಸಂಚಲನ ಮೂಡಿಸಿರುವ, ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಜಿ ಶಾಸಕ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದು, ನನಗೆ ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಈವರೆಗೂ ಗೊತ್ತಿರಲಿಲ್ಲ. ಈ ವಿಚಾರ ನನ್ನ ಗಮನಕ್ಕೆ ತಂದಿದ್ದು ಚಕ್ರವರ್ತಿ ಸೂಲಿಬೆಲೆ. ಅವರು ನನಗೆ ಫೋನ್ ಮಾಡಿದಾಗ ಚೈತ್ರಾ ಕುಂದಾಪುರ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಮೋಸ ಮಾಡಿದ್ದಾರೆಂದು ತಿಳಿಸಿದ್ದರು ಎಂದರು.
ಆ ಸಮಯದಲ್ಲಿ ನಮ್ಮ ಪಕ್ಷದಲ್ಲಿ ಆ ರೀತಿಯ ಪದ್ಧತಿ ಇಲ್ಲ ಎಂದು ಹೇಳಿದ್ದೆ. ಹಣಕ್ಕಾಗಿ ಟಿಕೆಟ್ ಮಾರಿಕೊಳ್ಳುವ ಪದ್ಧತಿ ನಮ್ಮಲ್ಲಿ ಇಲ್ಲ ಎಂದು ಹೇಳಿದ್ದೆ. ಹಣಕ್ಕಾಗಿ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ. ಯಾರೇ ಇದ್ದರೂ ಪ್ರಕರಣ ಹೊರಗೆ ಬರಲಿ. ಒಂದು ಪ್ರಕರಣವನ್ನು ಮುಚ್ಚಿಟ್ಟರೆ ಇಂತಹ ಹಲವು ಪ್ರಕರಣಗಳು ಮತ್ತೆ ಮರುಕಳಿಸುತ್ತವೆ. ಹೀಗೆ ಮೋಸ ಮಾಡಿ ಟಿಕೆಟ್ ದಕ್ಕಿಸಿಕೊಂಡರೆ ಮತ್ತೆ ಹತ್ತು ಜನರಿಗೆ ಮೋಸ ಮಾಡುವ ಸ್ವಭಾವ ಬರುತ್ತೆ. ಇಂಥ ಪ್ರಕರಣ ಹೊರಗೆ ಬಂದರೆ ಉಳಿದವರಿಗೆ ಪಾಠ ಆಗುತ್ತೆ ಎಂದರು.
ಈ ಪ್ರಕರಣ ನನ್ನ ಗಮನಕ್ಕೆ ಬಂದು ಒಂದೂವರೆ ತಿಂಗಳಾಗಿರಬಹುದು. ಹಣ ಕೊಡುವುದಕ್ಕೂ ಮುಂಚೆ ನಿಮ್ಮಂಥವರನ್ನು ಕೇಳಬಹುದಿತ್ತಲ್ವ ಎಂದು ಪ್ರಶ್ನೆ ಮಾಡಿದ್ದೆ. ಗೋವಿಂದ ಪೂಜಾರಿ ಯಾರ ಗಮನಕ್ಕೂ ತರದೆ ಹಣ ನೀಡಿದ್ದಾರೆ. ಆ ರೀತಿಯ ಪದ್ಧತಿ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಚಕ್ರವರ್ತಿ ಸೂಲಿಬೆಲೆಗೆ ನೇರವಾಗಿ ಹೇಳಿದ್ದೆ. ಮೋಸ ಹೋಗುವವರಿಗೂ ಪಾಠ ಆಗಬೇಕು, ಮೋಸ ಮಾಡಿದವರಿಗೂ ಪಾಠ ಆಗಬೇಕು. ಟಿಕೆಟ್ಗೆ ಸಂಬಂಧಿಸಿದಂತೆ ನಮ್ಮಲ್ಲಿ ಜಿಲ್ಲಾ ಸಮಿತಿ, ರಾಜ್ಯ ಸಮಿತಿ, ಕೇಂದ್ರೀಯ ಚುನಾವಣಾ ಸಮಿತಿ ಮಟ್ಟದಲ್ಲಿ ತೀರ್ಮಾನ ಆಗುತ್ತೆ. ತೀರ್ಮಾನ ಆಗಬೇಕಾದರೆ ಇಂಟರ್ನಲ್ ಹಾಗೂ ಎಕ್ಸ್ಟರ್ನಲ್ ಚರ್ಚೆಯಾಗುತ್ತದೆ ಎಂದು ಸಿ ಟಿ ರವಿ ಹೇಳಿದರು.