ಕರ್ನಾಟಕ

karnataka

ETV Bharat / state

ಬೆಂಗಳೂರು ಯುವಕನ ಶವಕ್ಕಾಗಿ ಪೊಲೀಸರಿಂದ ಚಾರ್ಮಾಡಿ ಘಾಟಿಯಲ್ಲಿ ಶೋಧ ಕಾರ್ಯ

ಬೆಂಗಳೂರು ಯುವಕನ ಅಪಹರಣ,ಕೊಲೆ ಪ್ರಕರಣ - ಚಾರ್ಮಾಡಿ ಘಾಟಿಯಲ್ಲಿ ಶವವನ್ನು ಬಿಸಾಡಿದ್ದ ಆರೋಪಿಗಳು - ಚಾರ್ಮಾಡಿ ಘಾಟಿನಲ್ಲಿ ಶವಕ್ಕಾಗಿ ಬೆಂಗಳೂರು ಪೊಲೀಸರಿಂದ ಶೋಧ

bengaluru-police-searching-for-dead-body-of-youth-at-charmadi-ghat
ಬೆಂಗಳೂರು ಯುವಕನ ಶವಕ್ಕಾಗಿ ಪೊಲೀಸರಿಂದ ಚಾರ್ಮಾಡಿ ಘಾಟಿಯಲ್ಲಿ ಶೋಧ ಕಾರ್ಯ

By

Published : Jan 4, 2023, 7:15 PM IST

Updated : Jan 4, 2023, 7:47 PM IST

ಬೆಂಗಳೂರು ಯುವಕನ ಶವಕ್ಕಾಗಿ ಪೊಲೀಸರಿಂದ ಚಾರ್ಮಾಡಿ ಘಾಟಿಯಲ್ಲಿ ಶೋಧ ಕಾರ್ಯ

ಚಿಕ್ಕಮಗಳೂರು :ಬೆಂಗಳೂರಿನಲ್ಲಿ ಅಪಹರಣಕ್ಕೊಳಗಾಗಿ, ಚಿಕ್ಕಬಳ್ಳಾಪುರದಲ್ಲಿ ಹತ್ಯೆಯಾದ ಯುವಕನ ಶವ ಪತ್ತೆಗಾಗಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ಬೆಂಗಳೂರು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸಾಲ ಪಡೆದು ಹಣ ನೀಡಲು ಸತಾಯಿಸುತ್ತಿದ್ದ ಹಿನ್ನೆಲೆ 9 ತಿಂಗಳ ಹಿಂದೆ ಯುವಕನನ್ನು ಕೊಲೆ ಮಾಡಿ ಚಾರ್ಮಾಡಿ ಘಾಟಿಯಲ್ಲಿ ಶವವನ್ನು ಎಸೆದ ಮಾಹಿತಿ ಮೇರೆಗೆ ಪೊಲೀಸರು ಈ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಚಾರ್ಮಾಡಿ ಘಾಟಿನಲ್ಲಿ ಯುವಕನ ಶವಕ್ಕಾಗಿ ಶೋಧ ಕಾರ್ಯ: ಬೆಂಗಳೂರಿನ ಕೋಣನಕುಂಟೆ ಮೂಲದ ಶರತ್ ಎಂಬ ಯುವಕನನ್ನು ಆರೋಪಿಗಳು ಕೊಲೆ ಮಾಡಿ ಚಾರ್ಮಾಡಿ ಘಾಟಿನಲ್ಲಿ ಮೃತದೇಹ ಎಸೆದಿದ್ದರು ಎಂಬ ಮಾಹಿತಿ ಕಳೆದ ತಿಂಗಳು ಪೊಲೀಸ್​ ತನಿಖೆಯಲ್ಲಿ ಬಯಲಾಗಿತ್ತು. ಆದ್ದರಿಂದ ಮಂಗಳವಾರದಿಂದ ಯುವಕನ ಶವಕ್ಕಾಗಿ ಚಾರ್ಮಾಡಿ ಘಾಟಿಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದು, ಇಂದೂ ಕೂಡ ಶೋಧ ಕಾರ್ಯ ಮುಂದುವರೆಸಲಾಗಿದೆ. ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ವಿಭಾಗದ ಚಾರ್ಮಾಡಿ ಘಾಟಿನ ದುರ್ಗಮ ಅರಣ್ಯದಲ್ಲಿ ಸ್ಥಳೀಯರ ನೆರವಿನೊಂದಿಗೆ ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ : ಸಾಮಾಜಿಕ‌ ಜಾಲತಾಣದಲ್ಲಿ ಯುವಕನೋರ್ವನನ್ನು ಅರೆಬೆತ್ತಲೆಗೊಳಿಸಿ ಹಗ್ಗದಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿತ್ತು‌‌‌. ಇದು ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ‌ ಗಮನಕ್ಕೆ ಬಂದಿತ್ತು. ಇದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಕೊತ್ತನೂರು ನಿವಾಸಿ ಶರತ್​ ಎಂಬಾತನನ್ನು ಬನಶಂಕರಿ ಬಸ್ ನಿಲ್ದಾಣದಿಂದ ಆರೋಪಿಗಳು ಕಾರಿನಲ್ಲಿ ಅಪಹರಿಸಿ ಮಾರಣಾಂತಿಕ ಹಲ್ಲೆ‌ ನಡೆಸಿ ಕೊಲೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರು.

ಮೃತ ಶರತ್ ಎಸ್ಸಿ-ಎಸ್ಟಿ ಯೋಜನೆಯಡಿ ಸರ್ಕಾರದಿಂದ ಸಿಗುವ ಸಾಲ ಮಂಜೂರು ಮಾಡಿಸಿಕೊಡುವುದಾಗಿ ಹೇಳಿ‌‌ಕೊಂಡು ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಎಂದು ಕೋಣನಕುಂಟೆ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಮತ್ತೊಂದೆಡೆ ಆರೋಪಿ ಶರತ್ ಕುಮಾರ್​ ಕಳೆದ ವರ್ಷ ಮೃತನಿಗೆ 20 ಲಕ್ಷ ಸಾಲ‌ ಕೊಟ್ಟಿದ್ದ ಎಂದು ಹೇಳಲಾಗ್ತಿದೆ.‌ ಕೊಟ್ಟಿದ್ದ ಹಣವನ್ನು ನೀಡಲು ಸತಾಯಿಸುತ್ತಿದ್ದ‌ ಮೃತ ಶರತ್​ನನ್ನು ಅಪಹರಿಸಿ ಹಣ ನೀಡುವಂತೆ ಆರೋಪಿ ಶರತ್ ಕುಮಾರ್​ ಪೀಡಿಸಿದ್ದ. ಕೆಲವೇ ದಿನಗಳಲ್ಲಿ ಹಣ ಕೊಡುವುದಾಗಿ ಹೇಳಿದ್ದ ಮೃತ ಶರತ್​, ನುಡಿದಂತೆ ನಡೆದುಕೊಳ್ಳದಿದ್ದರಿಂದ ಮಾರ್ಚ್ 23ರಂದು ಆರೋಪಿಗಳಿಂದ ಬನಶಂಕರಿಯಿಂದ ಮತ್ತೆ ಅಪಹರಿಸಲ್ಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದರು.

ಕಾರಿನಲ್ಲಿ ಅಪಹರಿಸಿ ದೈಹಿಕ ಹಲ್ಲೆ : ಶರತ್​ನನ್ನು ಕಾರಿನಲ್ಲಿ ಅಪಹರಿಸಿ ಚಿಕ್ಕಬಳ್ಳಾಪುರದ ಫಾರ್ಮ್‌ ಹೌಸ್‌ವೊಂದಕ್ಕೆ ಕರೆತಂದ ಶರತ್ ಕುಮಾರ್​ ಹಾಗೂ ಆತನ ಸಹಚರರು ಮನಬಂದಂತೆ ಥಳಿಸಿದ್ದಾರೆ. ಸತತ ಒಂದು ವಾರ ನಿರಂತರವಾಗಿ ದೈಹಿಕ ಹಲ್ಲೆ ನಡೆಸಿದ್ದಾರೆ. ಇನ್ನು ಅಪಹರಣ ಬಗ್ಗೆ ಅನುಮಾ‌ನ ಬಾರದಿರಲು ಆರೋಪಿಗಳು ಶರತ್ ಕಡೆಯಿಂದ ಪೋಷಕರಿಗೆ ಕರೆ‌ ಮಾಡಿಸಿ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ' ಎಂದಷ್ಟೇ ಹೇಳಲು ಅವಕಾಶ ಕಲ್ಪಿಸಿ ಫೋನ್ ಸಂಪರ್ಕ ಕಡಿತಗೊಳಿಸಿದ್ದರು. ಅಂದೇ ಫೋನ್ ಸ್ವಿಚ್ ಆಫ್ ಮಾಡಿ ಲಾರಿಯೊಂದರ ಮೇಲೆ ಬಿಸಾಕಿದ್ದಾರೆ‌. ತೀವ್ರತರ ಹಲ್ಲೆಯಿಂದ ಬಳಲುತ್ತಿದ್ದರಿಂದ ಶರತ್ ಮಾರ್ಚ್ 29 ರಂದು ಮೃತಪಟ್ಟಿದ್ದ ಎಂದು ತನಿಖೆ ನಡೆಸಿದ ಪಲೀಸರು ಮಾಹಿತಿ ನೀಡಿದ್ದರು.

ಮೃತದೇಹವನ್ನು ಚಾರ್ಮಾಡಿ ಘಾಟಿಯಲ್ಲಿ ಎಸೆದಿದ್ದ ಆರೋಪಿಗಳು : ಶರತ್​ನನ್ನು ಕೊಲೆ ಮಾಡಿದ ಬಳಿಕ ಆರೋಪಿಗಳು ಸಾಕ್ಷ್ಯಾಧಾರ ನಾಶಪಡಿಸಲು ಮುಂದಾಗಿದ್ದರು. ಗೋಣಿಚೀಲದಲ್ಲಿ ಶವ ಪ್ಯಾಕ್ ಮಾಡಿ ಕಾರಿನಲ್ಲಿ ಇಟ್ಟುಕೊಂಡು ಚಾರ್ಮಾಡಿ ಘಾಟ್​ನಲ್ಲಿ ಶವ ಬಿಸಾಕಿದ್ದರು. ಬಳಿಕ ಬೆಂಗಳೂರಿಗೆ ಬಂದು ಏನೂ ಆಗಿಲ್ಲವೆಂಬಂತೆ ಆರೋಪಿಗಳು ಓಡಾಡಿಕೊಂಡಿದ್ದರಂತೆ. ಆದರೆ, ಹಲ್ಲೆಯ ದೃಶ್ಯಾವಳಿ ವೈರಲ್ ಆಗಿದ್ದರಿಂದ ಸ್ಥಳೀಯ ವ್ಯಕ್ತಿಯೋರ್ವ ಇದನ್ನು ಇಟ್ಟುಕೊಂಡು ಮಾಧ್ಯಮ ಸೋಗಿನಲ್ಲಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಇದಕ್ಕೆ ಆರೋಪಿ ಶರತ್ ಕುಮಾರ್ ಅಷ್ಟೊಂದು​ ತಲೆಕೆಡಿಸಿಕೊಂಡಿರಲಿಲ್ಲ. ಈ ವಿಡಿಯೋ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಗಮನಕ್ಕೂ ಬಂದು ತನಿಖೆ ನಡೆಸಿದಾಗ ಕೊಲೆ‌‌‌ಯ ಸತ್ಯ ಸಂಗತಿ ಬಯಲಾಗಿತ್ತು.

ಇದನ್ನೂ ಓದಿ :ಬೆಂಗಳೂರಲ್ಲಿ ಕಿಡ್ನಾಪ್​​, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಯಲ್ಲಿ ಶವ!

Last Updated : Jan 4, 2023, 7:47 PM IST

ABOUT THE AUTHOR

...view details