ಚಿಕ್ಕಮಗಳೂರು:ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಪ್ರತಿದಿನ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತಿವೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕಾಫಿ ಬೆಳೆಗಾರರು ಅಕ್ಷರಶಃ ಕಣ್ಣೀರಲ್ಲಿ ಕೈ ತೊಳಿಯುವಂತೆ ಮಾಡುತ್ತಿದೆ.
ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದ ಸುಪ್ರಿಮ್ ಎಂಬುವರಿಗೆ ಸೇರಿದ್ದ ಒಂದು ಎಕರೆಯ ಕಾಫಿ ಮತ್ತು ಅಡಿಕೆ ತೋಟ ಮಳೆ ನೀರಿಗೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಹೇಮಾವತಿಯ ಉಪನದಿ ಜಪಾವತಿಯ ಅಬ್ಬರಕ್ಕೆ ಸುಮಾರು ಒಂದು ಎಕರೆಯಷ್ಟು ತೋಟ ನೀರಿನಲ್ಲಿ ಕೊಚ್ಚಿ ಹೋಗಿದೆ. ಸುಪ್ರಿಮ್ ಅವರ ಅಡಿಕೆ ಹಾಗೂ ಕಾಫಿತೋಟ ನದಿ ಪಾತ್ರದಲ್ಲಿದ್ದು, 2013ರಿಂದಲೂ ಪ್ರತಿವರ್ಷ ಮಳೆಗಾಲ ಬಂದರೆ ತೋಟ ಕೊಚ್ಚಿ ಹೋಗುತ್ತಿದೆ.