ಚಿಕ್ಕಬಳ್ಳಾಪುರ: ಫೇಸ್ಬುಕ್ನಲ್ಲಿ ಪರಿಚಯವಾದ ಯುವಕನೋರ್ವ ಮದುವೆಯಾಗುತ್ತೇನೆ ಎಂದು ನಂಬಿಸಿ 15 ಲಕ್ಷ ರೂ. ಪಡೆದು ಪ್ರಾಣ ಬೆದರಿಕೆ ಹಾಕುತ್ತಿದ್ದಾನೆಂದು ಮಹಿಳೆಯೋರ್ವಳು ಪೊಲೀಸ್ ಠಾಣೆ ಮೆಟ್ಟಿಲೀರಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ನಗರದ ಇಡ್ಲಿಪಾಳ್ಯದ ನಿವಾಸಿ ಸತೀಶ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾಳೆ. ವಿವಾಹವಾಗಿ ಮಕ್ಕಳನ್ನು ಹೊಂದಿದ್ದ ಮಹಿಳೆ ನಂತರ ವಿಚ್ಛೇದನ ಪಡೆದಿದ್ದರು. ಈ ವೇಳೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಯುವಕ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಜೊತೆಗೆ 15 ಲಕ್ಷ ರೂ. ಪಡೆದು, ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಯುವಕನ ವರಸೆ ಬದಲಾಗಿದ್ದು, ತನ್ನ ಫೋಟೋಗಳನ್ನು ಬಳಸಿ ಬ್ಲಾಕ್ಮೇಲ್ ಮಾಡಲು ಆರಂಭಿಸಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ.
ಅಲ್ಲದೆ ಮದುವೆಯಾಗುತ್ತೇನೆಂದು ನಂಬಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರತಿನಿತ್ಯ ಕುಡಿದು ಬಂದು ನನ್ನ ಮಕ್ಕಳಿಗೂ ಸಹ ಹೊಡೆದು ಅವರನ್ನು ಕೊಲೆ ಮಾಡುವುದಾಗಿ ಹೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.