ಚಿಕ್ಕಬಳ್ಳಾಪುರ: ಸಾಲ ಮಾಡಿ ಕೋಳಿ ಫಾರಂ ನಡೆಸುತ್ತಿದ್ದ ತಾಲೂಕಿನ ಕಿರಣ್ ಎಂಬುವರ ಪರಿಸ್ಥಿತಿ ಈಗ ದಯನೀಯವಾಗಿದೆ. 40 ದಿನ ಪಾಲನೆ ಮಾಡಿದ್ದ ಕೋಳಿಗಳಿಗೆ ಕೊರೊನಾ ಕರಿನೆರಳಿನಿಂದ ಬೆಲೆ ಕುಸಿತವಾಗಿ ಮಾಲೀಕ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
ನೌಕರಿ ಬಿಟ್ಟು ಕುಕ್ಕುಟೋದ್ಯಮ ಆರಂಭಿಸಿದ್ದ ಯುವಕ... ಬದುಕಿಗೆ ಕೊಳ್ಳೆ ಇಟ್ಟಿತು ಕೊರೊನಾ ಭೀತಿ!
ಖರ್ಚು ಮಾಡಿದ ಹಣ ವಾಪಸ್ ಬಾರದೇ ನಷ್ಟ ಅನುಭವಿಸುತ್ತಿರುವ ಕೋಳಿ ಸಾಕಣಿಕೆದಾರರು ಕೋಳಿಗಳ ಮಾರಣಹೋಮ ಮಾಡಲು ಮುಂದಾಗಿದ್ದಾರೆ.
ತಾಲೂಕಿನ ಅಂಗಟ್ಟ ಗ್ರಾಮದ ಕಿರಣ್ ಎಂಬುವರ ಕೋಳಿ ಫಾರಂ ಆರು ವರ್ಷಗಳ ಹಿಂದೆ ಪಿಎಲ್ಡಿ ಮತ್ತು ಪ್ರಗತಿ ಗ್ರಾಮೀಣ ಬ್ಯಾಂಕಗಳಲ್ಲಿ ಸಾಲ ಮಾಡಿ ಪ್ರಾರಂಭಿಸಲಾಗಿತ್ತು. ಮೂರು ವರ್ಷಗಳ ಹಿಂದೆ ತಂದೆಯ ಆಕಸ್ಮಿಕ ಸಾವಿನಿಂದ ನೌಕರಿ ಬಿಟ್ಟು ಕೋಳಿಫಾರಂ ನೋಡಿಕೊಳ್ಳಲು ಮುಂದಾಗಿದ್ದ ಕಿರಣ್, 11ಸಾವಿರ ಕೋಳಿಗಳ ಪಾಲನೆ ಮಾಡಿ ಪ್ರತಿ ಬ್ಯಾಚ್ಗೆ ಎರಡರಿಂದ ಎರಡೂವರೆ ಲಕ್ಷ ಸಂಪಾದನೆ ಮಾಡುತ್ತಿದ್ದರಂತೆ. ಆದ್ರೆ ಹಲವು ವದಂತಿಗಳಿಂದಾಗಿ ಜನರು ಕೋಳಿ ಮಾಂಸ ತಿನ್ನುವುದನ್ನೇ ನಿಲ್ಲಿಸಿದ್ದು, ವ್ಯಾಪಾರವಿಲ್ಲದೆ ಕುಕ್ಕುಟೋದ್ಯಮ ನೆಲಕಚ್ಚಿದೆ.
ಈಗ 40ದಿನ ಪಾಲನೆ ಮಾಡಿದ್ದ ಕೋಳಿಗಳನ್ನು ಖರೀದಿಸುವವರು ಮತ್ತು ತಿನ್ನುವವರಿಲ್ಲದೆ, ಬೆಲೆ ಕುಸಿತವಾಗಿ ಮಾರುಕಟ್ಟೆಯೇ ಸ್ತಬ್ಧವಾಗಿದೆ. ಕೋಳಿ ಸಾಕಾಣಿಕೆಗೆ ನೀಡಿರುವ ಎಜೆನ್ಸಿ, ಕೋಳಿಗಳನ್ನು ಜೀವಂತ ಸಮಾಧಿ ಮಾಡಿ. ಇಲ್ಲದಿದ್ದರೆ ಯಾರಾದರೂ ತಿನ್ನುವವರು ಬಂದರೆ ಉಚಿತವಾಗಿ ನೀಡಿ ಎಂಬ ಸೂಚನೆ ನೀಡಿದ್ದಾರಂತೆ.