ಚಿಕ್ಕಬಳ್ಳಾಪುರ :ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಕ್ಷೇತ್ರದಲ್ಲಿ ನಡೆದಿದೆ.
ಜಿಲ್ಲೆಯ ಪ್ರಮುಖ ಯಾತ್ರ ಸ್ಥಳವಾದ ಕೈವಾರ ಬೆಟ್ಟದ ಮೇಲೆ ಕಳೆದ ಎರಡು ತಿಂಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿದ್ದು ಪ್ರವಾಸಿಗರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿತ್ತು.
ಚಿರತೆಯನ್ನು ಸೆರೆಹಿಡಿಯುವುದರಲ್ಲಿ ಅರಣ್ಯ ಇಲಾಖೆಯೂ ಸಹ ಸಾಕಷ್ಟು ಶ್ರಮವಹಿಸಿದ್ದು ಚಿರತೆ ಮಾತ್ರ ಕಣ್ಣಾಮುಚ್ಚಾಲೇ ಆಟವಾಡಿ ತಪ್ಪಿಸಿಕೊಳ್ಳುತ್ತಿತ್ತು. ಇದುವರೆಗೂ ಎರಡು ಬಾರಿ ಪ್ರತ್ಯಕ್ಷವಾದ ಚಿರತೆ ಪ್ರವಾಸಿಗರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯ ಮೂಡಿಸಿದ್ದು, ಬೆಟ್ಟದ ಪಕ್ಕದ ಅರಣ್ಯದಲ್ಲಿ ಕಾಡು ಹಂದಿಗಳನ್ನು ಭೇಟಿಯಾಡುತ್ತಿತ್ತು. ಆದ್ರೆ ಇಲ್ಲಿಯವರೆಗೆ ಯಾವುದೇ ಸಾಕು ಪ್ರಾಣಿ ಸೇರಿದಂತೆ ರೈತರಿಗೂ ತೊಂದರೆ ಕೊಟ್ಟಿಲ್ಲ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸದ್ಯ ಜಿಲ್ಲೆಯ ಉಪಾರಣ್ಯ ನಿರೀಕ್ಷಕರ ಮಾರ್ಗದರ್ಶನದಂತೆ ಚಿಂತಾಮಣಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿನಲ್ಲೇ ಬೋನು ಇಟ್ಟು ಕುರಿ ಕಟ್ಟಿ ಬಲೆ ಬೀಸಿದ್ದರು. ಕುರಿ ತಿನ್ನುವ ಆಸೆಗೆ ಬಂದ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಚಿರತೆಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ರವಾನಿಸುತ್ತಿರುವುದಾಗಿ ತಿಳಿಸಿದ್ದಾರೆ.